‘ಬದುಕೇ ಒಂದು ನಾಟಕರಂಗ ಕಣಯ್ಯ’ ಎಂದು ನನ್ನ ಪದವಿ ಓದಿನ ಸಂದರ್ಭದಲ್ಲಿ ನಮ್ಮ ಡಿಪಾರ್ಟುಮೆಂಟಿನ ಮುಖ್ಯಸ್ಥರು ಖಾಸಗಿಯಾಗಿ ಬಳಿ ಹೇಳಿದರು. ಮುಖ್ಯಸ್ಥರಿಗೆ ಯಾವುದೇ ಕಲಾಪ್ರೇಮ ಇರದಿದ್ದರೂ ಚಂದಗೆ ನಾಟಕೀಯ ಸಂಭಾಷಣೆ ತೂರಿದ್ದು ನನ್ನ ನೆನಪಿನ ಕವಾಟಗಳಲ್ಲಿ ಈಗಲೂ ಅಚ್ಚೊತ್ತಿದೆ ನೋಡಿ!
ಈ ಸ್ಮರಣೆ ಯಾಕೆ ಬಂತೆAದರೆ ಕೆಲವು ದಿನಗಳ ಹಿಂದೆ ಎರಡು ಬೀದಿ ನಾಟಕಗಳನ್ನು ನೋಡುವ ಅವಕಾಶ ಸಿಕ್ಕಿದ್ದರಿಂದ.
ನಿಜ, ನಾಟಕವು ಗಾಢವಾಗಿ ಆವರಿಸುವ ಕಲೆ. ಇಲ್ಲಿ ಸಂಗೀತವಿದೆ, ಸಂಭಾಷಣೆಯಿದೆ. ಅಭಿನಯದ ಬಹುಪಾಲು ವಾಸ್ತವಕ್ಕೆ ಮುಖಾಮುಖಿಯಾಗುವುದರಿಂದ ಯಕ್ಷಗಾನಕ್ಕಿಂತ ನಾಟಕವು ಮನಕೆ ಇಳಿಯುವ ಅಡಿ ಆಳದ್ದಾಗಿರುತ್ತದೆ. ಅಂದರೆ ಯಕ್ಷಗಾನವೇ ಇರಲಿ, ದೊಡ್ಡಾಟವೇ ಆಗಲಿ ಅದರ ವೈಭವ ಮತ್ತು ತಲ್ಲೀನತೆಯೊಂದಿಗೆ ಗಂಭೀರತೆ ಏರುವುದು ಕೇವಲ ಪೌರಾಣಿಕ ಕಥಾ ಹಂದರವಿದ್ದರೆ ಮಾತ್ರ.
ಪ್ರಸಕ್ತ ವಿದ್ಯಮಾನದ ಸಂಗತಿ ಹೊಸೆದು ರೂಪಿಸಿದ ಅನೇಕ ಯಕ್ಷಗಾನ ಪ್ರಸಂಗಗಳು ಪ್ರೇಕ್ಷಕರನ್ನು ಆವರಿಸುವುದರಲ್ಲಿ ಸೊರಗಿವೆ.
ಕಳೆದ ಕೆಲವು ವರ್ಷಗಳಿಂದ ನಾಟಕಗಳನ್ನು ನೋಡಿಕೊಂಡು ಬರುತ್ತಿದ್ದೇನೆ. ಹವ್ಯಾಸಿ, ವೃತ್ತಿಪರ, ಅಮೆಚೂರ್ ಹೀಗೆ ಅವಕಾಶ ಸಿಕ್ಕಾಗ ನಾಟಕ ತಂಡದ ಪ್ರಕಾರಗಳನ್ನು ಕಂಡಿರುವೆ. ಪ್ರೇಕ್ಷಕನಾಗಿ ಆ ತಂಡಗಳÀ ಪ್ರದರ್ಶನಗಳÀಲ್ಲಿ ಮಗ್ನಗೊಳ್ಳುತ್ತಾ ಕಲಾರಸಿಕನಾಗಿ ಎಚ್ಚರಗೊಳ್ಳುತ್ತಾ ಬಂದಿರುವೆ.
ಪರಿಕರ ತುಂಬಿ ಸಜ್ಜಾದ ರಂಗದ ಮೇಲಿನ ಸ್ವರಮೇಳಗಳು, ಪಾತ್ರಗಳ ಆಂಗಿಕ ಕಸರತ್ತು, ಭಾವದ ಹರಿವು ಮತ್ತು ಲೈಟಿಂಗ್ಸ್ಗಳನ್ನು ಪಂಚೇAದ್ರಿಯಗಳಿAದ ಆಸ್ವಾದಿಸುತ್ತಿದ್ದಾಗ ಇನ್ನೂ ಏನೋ ಬೇಕೆಂಬ ಚಡಪಡಿಕೆ!
ಆ ಚಡಪಡಿಕೆಗೆ ಉತ್ತರ; ಬೀದಿ ನಾಟಕದಲ್ಲಿದ್ದು, ಇದರಲ್ಲಿ ಬರುವ ಪಾತ್ರಗಳು ಹೆಚ್ಚಿನ ಅಲಂಕಾರವಿಲ್ಲದೆ ಮನದ ಸಹಜ ಅವಕಾಶವನ್ನು ಕಲೆಯ ಮುಕ್ತತೆಯಿಂದ ತುಂಬುವ ರೀತಿ ಯಾವುದೇ ಆಡಂಭರವಿಲ್ಲದ್ದು. ಜೊತೆಗೆ ಸರಳ ವೈಚಾರಿಕತೆಯ ಆಕರ್ಷಣೆಯೇ ಬೀದಿ ನಾಟಕ ಮೈತಾಳುವ ಬಗೆ.
ಗಮನಿಸಬೇಕಾದ ವಿಷಯ; ಈಗೀಗ ಬೀದಿ ನಾಟಕ ಕಾಣಸಿಗುವುದೇ ಅಪರೂಪ. ಬೀದಿಯಲ್ಲೋ ರಸ್ತೆಯಲ್ಲೋ ಸಾಮಾಜಿಕ ನ್ಯಾಯಕ್ಕಾಗಿ ಪಟ್ಟಭದ್ರ ಹಿತಾಸಕ್ತಿ ವಿರುದ್ಧ ಘೋಷಣೆ ಕೂಗಿದರೆ ಯಾರಾದರೂ ಬಂಧಿಸುವರೆAಬ ಭೀತಿ ಪ್ರತಿಯೊಬ್ಬ ಸಾಮಾನ್ಯ ನಾಗರೀಕರ ಎದೆಯಾಳದಲ್ಲಿರುವುದು ನಿಜ.
ರಂಗಮAಚದಲ್ಲಿ ಬೆಚ್ಚಗೆ ಪವಡಿಸಿಕೊಂಡಿರುವ ನಾಟಕವು ಬೀದಿಗೆ ಬಂತೆAದರೆ ಅಲ್ಲಿನ ಪ್ರದೇಶದ ಪ್ರೇಕ್ಷಕ ತಮ್ಮೊಳಗಿರುವ ಅಥವಾ ಬಯಸುವ ಭಾವವನ್ನು ಕಲೆಯ ಮೂಲಕ ಕಾಣಬಹುದೇನೋ ಎಂದು ತವಕಿಸುತ್ತಿರುತ್ತಾನೆ. ಬಯಲು ರಂಗದಲ್ಲೂ, ಆಡಿಟೋರಿಯಂನಲ್ಲೂ, ಬೀದಿಯಲ್ಲೂ ಪ್ರದರ್ಶನಗೊಳ್ಳುವ ನಾಟಕದ ಪಾತ್ರಗಳಿಗೆ ಪ್ರೇಕ್ಷಕ ಪ್ರತಿಕ್ರಿಯಿಸುವ ರೀತಿಯೂ ಭಿನ್ನವಾಗಿರುತ್ತದೆ.
ಬೀದಿ ನಾಟಕ ಜಾಸ್ತಿ ಪ್ರಚಲಿತದಲ್ಲಿರುವ ರಾಜ್ಯಗಳನ್ನು ನೋಡುವುದಾದರೆ; ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಬಂಗಾಳ, ಉತ್ತರಪ್ರದೇಶ, ಮಹಾರಾಷ್ಟç ಮತ್ತು ಕರ್ನಾಟಕ. ಈ ರಾಜ್ಯಗಳ ಬೀದಿ ಬೀದಿಗಳಲ್ಲಿ ಕಲೆಯ ಸೊಗಡು ಅನುರಕ್ತಗೊಂಡಿದೆ ಎಂದು ತಿಳಿಯಬಹುದು. ಸಾಮಾಜಿಕ ಅರಿವು ಮತ್ತು ಹೋರಾಟ; ಇವು ಬೀದಿ ನಾಟಕದ ಶಕ್ತಿ. ರಾಜಕೀಯ ಅಸ್ಥಿರತೆಯೊಂದಿಗೆ ವಸಾಹತು ಆಡಳಿತದ ದಳ್ಳುರಿ ವಿರುದ್ಧ ಪ್ರತಿಭಟನೆಯ ರೂಪವಾಗಿ ೧೯೪೦ರಿಂದ ಬೀದಿ ನಾಟಕದ ರಂಗು ಭಾರತದಲ್ಲಿ ಕುಡಿಯೊಡೆಯಿತು.
ವೃತ್ತಿಪರ ಥಿಯೇಟರ್ ನಾಟಕ ತಂಡಗಳ ಹೆಸರಿಗಿಂತಲೂ ಬೀದಿ ನಾಟಕ ತಂಡದ ಹೆಸರುಗಳು ಬಹಳ ಸ್ವಾರಸ್ಯಕರ. ‘ತಮಾಶಾ’ ಎಂಬ ಮಹಾರಾಷ್ಟçದ ಬೀದಿ ನಾಟಕ ತಂಡ ತುಂಬಾ ಹಿಂದಿನಿAದಲೂ ಈಗಲೂ ಕೂಡ ಜೀವಂತಿಕೆ ತುಂಬಿ ಬೀದಿ ಪ್ರದರ್ಶನ ನೀಡುತ್ತಾ ಬರುತ್ತಿದೆ. ಸಫ್ದರ್ ಹಶ್ಮಿ ಅವರನ್ನು ಬೀದಿ ನಾಟಕದ ಪಿತಾಮಹ ಎಂದು ಕರೆಯಲಾಗಿದ್ದು, ಅವರು ಈ ನಾಟಕಗಳನ್ನು ಸಮಾನತೆ ಮತ್ತು ಸಾಮರಸ್ಯದ ಪ್ರತೀಕಗಳಾಗಿ ನಿರೂಪಿಸಿದರು.
ಇಷ್ಟೆಲ್ಲಾ ನಾನು ಹೇಳ ಹೊರಟಿದ್ದು ಕೆಲವು ವಾರಗಳ ಹಿಂದೆ ಎರಡು ಬೀದಿ ನಾಟಕಗಳನ್ನು ನೋಡಿದ ಸಲುವಾಗಿ. ಬಹುಭಾಷಾ ನಟ ಪ್ರಕಾಶ್ ರಾಜ್ ನೇತೃತ್ವದ ನಿರ್ದಿಗಂತ ಸಂಸ್ಥೆ ಹಾಗೂ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಆಯೋಜಿಸಿದ ‘ನಾವು ಯಾವಾಗ ಬದಲಾಗುತ್ತೇವೆ’ ಮತ್ತು ‘ಈಗ ಹೇಳಿ ನಾವೇನ್ಮಾಡೋಣ’ ಎಂಬ ಬೀದಿ ನಾಟಕಗಳು ಮಂಗಳೂರಿನಲ್ಲಿ ಪ್ರದರ್ಶನಗೊಂಡವು.
ಈ ನಾಟಕವನ್ನು ಅಲೋಶಿಯಸ್ ಕಾಲೇಜು ಅಂಗಳದಲ್ಲಿ ಆಡಲಾಗಿದ್ದು, ಪ್ರೇಕ್ಷಕರನ್ನೂ ಕೂಡ ನಾಟಕದ ಭಾಗವಾಗಿ ಕುಣಿಸಿರುವುದು ಉಂಟಲ್ಲಾ; ಅದು ಬೀದಿ ನಾಟಕದ ಚೈತನ್ಯ.
ಪುತ್ತೂರಿನ ಸಂಸಾರ ತಂಡದವರ ‘ನಾವು ಯಾವಾಗ ಬದಲಾಗುತ್ತೇವೆ’ ಎಂಬ ನಾಟಕದ ಕೇಂದ್ರ ನಿರೂಪಣೆಯು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಮೈತಳೆದಿತ್ತು. ನಾಟಕದ ಪಾತ್ರಧಾರಿಗಳು ಅತ್ಯಲ್ಪ ಸಂಭಾಷಣೆಯಲ್ಲಿ ತೊಡಗಿದ್ದರೂ ಬಹುಪಾಲು ಹಾಡು ಕುಣಿತದ ಮೂಲಕ ಮಾತನಾಡಬೇಕಾದ ವಿಷಯಗಳನ್ನು ಪ್ರದರ್ಶಿಸಿದರು. ಇಲ್ಲಿನ ಕಲಾವಿದರು ಆಂಗಿಕ ಅಭಿನಯ ಮತ್ತು ದೈಹಿಕ ಸೂಕ್ಷö್ಮಗಳಿಗೆ ಒತ್ತು ಕೊಟ್ಟಂತಿರಲಿಲ್ಲ. ಅದರೂ ಬೀದಿ ನಾಟಕಗಳೇ ಅಪರೂಪ ಅನಿಸುವ ಈ ಕಾಲದಲ್ಲಿ ‘ಮನುಜ ನೀ ಮನುಜನಿಗೆ ಅಭಯ ನೀಡಯ್ಯ’ ಗೀತೆಯು ಪ್ರೇಕ್ಷಕರನ್ನು ಸೆಳೆಯಿತು.
ಷಂಶುದ್ದೀನ್, ಭವಾನಿ, ಅರ್ಪಿತಾ, ಮಿಥುನ್ ಸೋನಾ, ಕೃಷ್ಣಪ್ಪ ಬೆಂಬಿಲ ಮೊದಲಾದ ಕಲಾವಿದರ ಗಣ ‘ನಾವು ಯಾವಾಗ ಬದಲಾಗುತ್ತೇವೆ’ ನಾಟಕದ ಪಾತ್ರವಹಿಸಿದ್ದರು.
ಎರಡನೇ ಬೀದಿ ನಾಟಕವೆಂದರೆ ‘ಈಗ ಹೇಳಿ ನಾವೇನ್ಮಾಡೋಣ’. ಇದನ್ನು ಜೋಡುಮಾರ್ಗದ ಸಂಸಾರ ತಂಡದವರು ಅಭಿನಯಿಸಿದರು. ಇದರಲ್ಲಿನ ಪಾತ್ರವರ್ಗದ ಆಯ್ಕೆಯಲ್ಲಿ ನಿರ್ದೇಶಕರ ಮುತುವರ್ಜಿ ಎದ್ದುಕಾಣುತ್ತಿತ್ತು. ಕೊಳ್ಳಿ ದೈವ ಮತ್ತು ಮಾರಿ ಭೂತಗಳು ಸಜ್ಜನಿಕೆಯ ವೇಷ ಧರಿಸಿ ಸಮಾಜದಲ್ಲಿ ಸೇರಿಕೊಳ್ಳುತ್ತವೆ. ನಂತರ ಆ ಸಜ್ಜನಿಕೆಯ ವೇಷಗಳು ಜನರಿಗೆ ಹೇಗೆಲ್ಲಾ ಪಾತಕಗಳನ್ನು ಉಂಟುಮಾಡಲು ಪ್ರಚೋದಿಸುತ್ತವೆ ಎಂಬುದು ಈ ಬೀದಿ ನಾಟಕದ ಕಥಾ ತಿರುಳು. ಇಂತಹ ದೈವ ಭೂತಗಳನ್ನು ಸಮಾಜದ ನಡುವಿನಿಂದ ಅಟ್ಟಿಸಿ ಎಂಬುದೇ ‘ಈಗ ಹೇಳಿ ನಾವೇನ್ಮಾಡೋಣ’ದ ಕ್ಲೆöÊಮಾಕ್ಸ್.
ನಾಟಕದ ಹಿನ್ನೆಲೆಯ ಚೆಂಡೆ ವಾದನ ಬೀದಿಯ ಕಲಾ ಪ್ರದರ್ಶನಕ್ಕೆ ಹುರುಪು ಕೊಟ್ಟಿತ್ತು. ‘ಕೊಳ್ಳಿ ದೈವವೂ ಮಾರಿ ಭೂತವೂ ಹೊರಟವು ಜನರ ನಡುವಿನಲಿ’ ಎಂಬ ಪದ್ಯಕ್ಕೆ ಪ್ರೇಕ್ಷಕರನ್ನು ಎದ್ದು ನರ್ತಿಸಿದರು. ಪ್ರಜ್ವಲ್, ಅಶ್ವಿನಿ, ಸಿಂಧು, ತೃಪ್ತಿ, ಯಶಸ್, ವಿಷ್ಣುಗುಪ್ತ, ರಾಕೇಶ್, ಪೃಥ್ವಿರಾಜ್, ಮೌನೇಶ ಮೊದಲಾದವರು ‘ಈಗ ಹೇಳಿ ಏನ್ಮಾಡೋಣ’ದಲ್ಲಿ ಪಾತ್ರವಹಿಸಿದ್ದರು.
ಇಂದಿನ ಸಮಾಜದ ಕೊರಕಲುಗಳನ್ನು ಎತ್ತಿ ತೋರಿಸಲು ಹಾಗೂ ಮಾನವೀಯ ಜೀವಂತಿಕೆಯನ್ನು ಉಳಿಸಿ ಸಾರ್ವಜನಿಕ ಅರಿವು ಮೂಡಿಸಲು ಬೀದಿ ನಾಟಕಗಳು ಉಳಿಯಬೇಕಿದೆ, ಉಳಿಸಬೇಕಿದೆ ಎಂಬುದೇ ನಮ್ಮನಿಮ್ಮೆಲ್ಲರ ಆಶಯವಾಗಲಿ.
-ಅಕ್ಷಯ ಕಾಂತಬೈಲು


No comments:
Post a Comment