Friday, April 12, 2024

ಕಾವ್ಯ ಹೀರು ಬಾ ತಿಗಣೆ


                  ನಿನ್ನ ಹೊಕ್ಕುಳಲ್ಲಿ ತಿಗಣೆಗಳು ಆಶ್ರಯಿಸಿದ್ದವು

                  ನಿನ್ನೊಡಲಿನ ಖುಶಿಯನ್ನು 

                  ಅವು ತುಟಿ ಅಮುಕಿ ಚಿಪುತ್ತಿದ್ದವು


                  ಭದ್ರಕಾಳಿಯೇ,

                  ನಿನ್ನ ಚೂಪು ಉಗುರುಗಳಿಂದ 

                  ಎಷ್ಟೋ ರಕ್ತಪಿಪಾಸುಗಳ

                  ರುಂಡ ಜಜ್ಜಲು ಹವಣಿಸುತ್ತಿರುವೆಯಲ್ಲಾ?!

                  ವಿಶಾಲಾಕ್ಷಿಯೇ,

                  ಭಕ್ತರು ನಿನ್ನ ಬಿರಿದ ಸೌಂದರ್ಯ ನೋಡಿ

                  ಪೂಜಿಸುವ ನೆಪದಲ್ಲಿ ಸಂಧಿಮಾಡಿ 

                  ಕಣ್ಣು ಹೊಡೆದು

                  ಕಸುವುಳ್ಳ ಮಡಿಲ ವಾಸ ಬೇಡುವರು

                  ಪುಷ್ಟವಾದ ತೋಳ ಸಂಗಾತ ಬಯಸುವರು

                  ಪವಿತ್ರ ಬಂಧವೆAದು ಅರ್ಚಿಸುವರು


                  ರಕ್ತೇಶ್ವರಿಯೇ,

                  ನಿನ್ನ ಜಪಿಸಿ ಪಲ್ಲಕ್ಕಿ ಹೊತ್ತು, ಅಭಿಷೇಕ ನಡೆಸಿ 

                  ಹೂವ ಮಡಿಗಿಟ್ಟು ಅದದೇ ಮಂತ್ರ ಹೇಳುತ್ತಾ

                  ಜಾಗಟೆ ಬಾರಿಸುತ್ತಾ ದಿನ ಮಾಸ ಕಳೆಯಿತು

                  ವರುಷ ಸಮೀಪಿಸಿ ನೀನು ಒಲಿದೇಬಿಟ್ಟೆ!

                  ಈಗ ನೀನು ಬರೀ ಚಿಟ್ಟೆ


                  ಅತೃಪ್ತಿಯ ಚಿತ್ತಾರದ ರಕ್ಕೆಗಳ ಪತಂಗ

                  ಈಗ ನಿನ್ನ ಮೊಲೆಗಳಿಂದ ಹಾಲು ಬರದು

                  ನಿನ್ನ ದೇಹದ ಸಂದಿನಲ್ಲಿ ರಕ್ತ ಹರಿಯದು

                  ಬಿಡೇ... ಯಾವ ತಿಗಣೆಯೂ ನಿನ್ನ ಕಚ್ಚದು!


                  ಪ್ರೇಮ ದುಂಧುರೇ,

                  ವರುಷ ಮೀರಿದಂತೆ ನೀನು ಒಲಿದೇಬಿಟ್ಟೆ

                  ಹೆರಳಿಗೆ ಹೂವ ತೊಡಿಸಿದವ

                  ಒಂದು ಮಲ್ಲಿಗೆ ಮುಗಟನ್ನೂ ಕೊಟ್ಟರೆ ಕೇಳು!

                  ಮಂತ್ರ ಪಠಿಸಿದವ

                  ಒಂದು ರಮ್ಯ ಅಕ್ಷರವ ಬರೆದರೆ ಕೇಳು!

                  ಎರಡೂ ಕೈಗಳಿಂದ ಪಲ್ಲಕ್ಕಿ ಹೊತ್ತವ

                  ಜೀವನದ ನಡುವೆ ಕೈಚೆಲ್ಲಿ ಕೂರದಿದ್ದರೆ

                  ಕೇಳು! ಕೇಳು! ಕೇಳು!


                  ಆಗ ನೆನಪಾಗಿ ನೀನು ಹೇಳುತ್ತೀ...

                  ಓ ತಿಗಣೆಯೇ ಎಲ್ಲಿ ಅವಿತಿರುವೆ

                  ಬಾ ತಿಗಣೆ ಇಲ್ಲಿ ನನ್ನ ಹೊಕ್ಕುಳ ಕಚ್ಚು ಬಾ

                  ಒಂದೇ ಸಮಾ ಈ ವೇದನೆ ಸಂಕಟವ ಹೀರು

                  ಪೂರಾಪೂರ ಹೀರು ಎಲ್ಲಿರುವೆ ತಿಗಣೆಯೇ?


                                   -ಅಕ್ಷಯ ಕಾಂತಬೈಲು


ಕವನ ಬೈಕ್ ಸೈಲೆನ್ಸರ್


                  

                  ಚಾಲನೆ ಮಾಡುತ್ತಾ

                  ಎಂ.ಜಿ. ರೋಡು ಹಾದು

                  ಚರ್ಚ್ ಸ್ಟಿçÃಟ್ ಮೇಲೆ

                  ಬೈಕ್ ಓಡಿಸುವಾಗ

                  ಹದಿನೆಂಟು ದಾಟಿದ ಚಕೋರಿ

                  ದಾಟುತ್ತಿದ್ದಳು ರಸ್ತೆ


                  ನೀಲ ಬಣ್ಣದ ಟೋರ್ನ್ ಜೀನ್ಸು

                  ಅವಳ ಮೀನಖಂಡಕ್ಕೆ 

                  ಕೊಡುತ್ತಿತ್ತು ಗ್ರಿಪ್ಪು


                  ಘಕ್ಕನೆ! ನಿಲ್ಲಿಸಿದೆ ಬೈಕ್

                  ವೈಯಾರಿಯ ರಸ್ತೆ ಹಾಯಲು ಬಿಟ್ಟೆ

                  ಆಕೆಯ ಬಳುಕು ನೋಡುತ್ತಾ ಇದ್ದೆ


                  ಕಣ್ಣಿಂದ ನೇರವಾಗಿ ಇಕ್ಕಿದಳು ಬಾಣ

                  ಹೆಲ್ಮೆಟ್ ಗ್ಲಾಸು ತೂರಿದ ದೃಷ್ಟಿಯ ಚೂಪು

                  ಟ್ರಾಫಿಕ್ ನಡುವೆಯೂ ಕೊಂಕದೆೆ ಡೊಂಕದೆ

                  ನನ್ನ ರಸತಳಕ್ಕೆ ಏಕಧಂ ಅಪ್ಪಳಿಸಿತು!


                  ಆಕೆಯ ಆವೊಂದು ನೆಲ್ಲಿಕಾಯಿ ಗಾತ್ರದ

                  ದಟ್ಟ ಕಪ್ಪು ಕಣ್ಣ ಬೊಂಬೆ

                  ಆವೊಂದು ಪಿಂಕು ರಂಗು ಕಿರಿ ತುಟಿಯ

                  ಮತ್ತೂ ಕಿರಿದಾಗಿಸಿ ಥಟ್ಟನೆ ಅಗಲಿಸಿ

                  ಗ್ಲೋಬಿನಂತೆ ಉಬ್ಬಿ ಢಮ್ಮನೆ

                  ಒಡೆತಕಂಡ ಚುಯಿಂಗ್ ಗಮ್ಮು!


                  ತಕ್ಷಣ ಬೈಕ್ ಸೈಲೆನ್ಸರಲ್ಲಿ

                  ಭಗ್ಗನೆ ಹೋಮದಂತೆ ಎದ್ದ ಹೊಗೆ

                  ನನ್ನನ್ನೂ ಎಚ್ಚರಿಸಿತು!

                  ನಿಮ್ಮನ್ನೂ ಕವಿತೆ ಓದಿಸಿತು...

                               -ಅಕ್ಷಯ ಕಾಂತಬೈಲು


ಕವಿತೆ ಮಿಲನ ಪರ್ವ

ರೋಜಾ ಹೂವಿನ ಪಕಳೆಗಳು ಚೆಲ್ಲಾಡಿದ

ಎದೆಯು ಭರ್ತಿ ಪರಿಮಳದ ಪನ್ನೀರ ಕಲ್ಯಾಣಿ


ಬಿಳಿ ಮುಗಿಲ ಬಾಚಿ ಹಚ್ಚಿ ಕಟೆದ ಮೈಮಾಂಸ

ಸ್ಪರ್ಶ ದಂಡೆಗೆ ಬೆಂಬಿಡದೆ ಮುತ್ತಿಕ್ಕುವ ಅಲೆ


ಅನಂಗನ ಬಾಣ ನಾಟಿಸುವ ಕಾಡಿಗೆ ಹುಬ್ಬು

ಕಣ್ಣ ಸೆಳಕು ಇನ್ನೂ ಬೇಡುವ ಅಪ್ಪುವ ದಾಹ


ಹಿಮಗಿರಿ ಶೃಂಗಗಳ ಬಿಚ್ಚಿಟ್ಟ ತೆಳುಪಿನ ಉಡುಪು

ಭವ ಕಂದರಗಳ ದಾಟಿದಂತೆ ಕಾಲಗೆಜ್ಜೆಯ ತಿಲ್ಲಾನ


ದೇಹದಾರಿಯ ಮಾಟ ಘ್ರಾಣಿಸುವ ಸೂಕ್ಷö್ಮ ಹವೆ

ಚಲಿಸುತ್ತಾ ಸ್ಥಿತಿಯ ಅಂತ್ಯ ಮುಟ್ಟುತ್ತಾ ಕಾಣದ ಗಮ್ಯ


ಮೋಹದ ಒಸರಿನ ಕಾರಂಜಿ ಒತ್ತಿಟ್ಟಲ್ಲಿ ಪಾದ

ನಿಂತಲ್ಲೇ ಗರ್ಭಗುಡಿ ಮಾತೆಂದರೆ ಮಂತ್ರ! 


 -ಅಕ್ಷಯ ಕಾಂತಬೈಲು

Wednesday, February 07, 2024

ಇದು ಭೂರಾಶಿಯ ಒಟ್ಟು ಜಿಗಿತ!

  ಓದುಗರೇ ನಲ್ಮೆಯ ನಮಸ್ಕಾರ. ಈ ಅಕ್ಷರಗಳ  ಮೇಲೆ ನಿಮ್ಮ ಕಣ್ಣೋಟದ ಸ್ಪರ್ಶಕ್ಕೆ ಪುಳಕಿತನಾದೆ! ಬರಹದಲ್ಲಿ ನನಗಿದು ನವೀನ ಅನುಭವ; ಆಕಸ್ಮಿಕ ಎಂಬಂತೆ ಜರುಗಿದ ಮೊಟ್ಟ ಮೊದಲ ಪ್ರೇಮಕ್ಕೆ ಸುಖದ ಸುರುಳಿ ನಾಭಿಯಿಂದ ಹೊರ ಚಾಚಿದಂತೆ. ಆ ಮೂಲಕ ಹೊತ್ತಿದ ಜೀವದ್ರವವ ಅಕ್ಷರದ ಸಹಾಯದಿಂದ ಸೋಸಿದ ಹಾಗೆ. ಈ ಅಂಕಣಕ್ಕೆ ಏನು ನಾಮ ಇಡುವ? ಶೋಧದ ದುಪಟ್ಟಾ ಹಿಡಿದು ಆಲೋಚಗೆ ಬಿದ್ದೆ.


  ಬುದ್ದಿಯಿಂದ ಗಮನಿಸುವ ಹಾಗು ಯೋಚಿಸಿ ಪ್ರಶ್ನೆ ಹಾಕುವ ಗುಣ ನನ್ನೊಳಗೆ ತೆರೆದ ಪ್ರಾಯದ ಮೂಲ ಸಂದರ್ಭ; ಆಗಿನ ನೆನಪು ಬೆರಕೆ ಆಗದಂತೆ, ಆ ನೆನಪು ಉದ್ರೇಕಗೊಂಡು ಬಿಲ್ಡಪ್ಪು ಆಗದೆ, ನೇರ ನೈಜತೆಗೆ ಅಂಟಿಕೊಂಡು ಹುಟ್ಟಿನ ಲಾಗಾಯ್ತಿಂದ ಜೀವನದ ಸನ್ನಿವೇಶಗಳನ್ನು ರಾಶಿ ಒಟ್ಟತೊಡಗಿದೆ. ಸಮಾ ಧೇನಿಸತೊಡಿದೆ. ಛೇ, ಯಾವುದೂ ಕ್ರಮಬದ್ಧವಾಗಿಲ್ಲ. ಆವಾಗ ಆದ ದರ್ಶನ 'ಒಟ್ರಾಶಿ'. ಅದೇ ಈ ಅಂಕಣದ ಹೆಸರಾಗಿ ಸೆಟ್ಟೇರಿಸಿದೆ!

  ಮೊದಲು ಕಿಂಚಿತ್ತು ನನ್ನದೇ ಪರಿಚಯ ಮುಂದಿಡುವೆ. ನನ್ನೀ ಮೈಯ ಹೆಸರು ಅಕ್ಷಯ. ಜನನ ಸ್ಥಳ; ಆ ಕಡೆ ಕೊಡಗೂ ಅಲ್ಲದ ಈ ಕಡೆ ದಕ್ಷಿಣ ಕನ್ನಡದ ವಾತಾವರಣವೂ ಇಲ್ಲದ ಸಂಪಾಜೆಯಿಂದ ಒಂದಷ್ಟು ದೂರ ವಿರಾಜಮಾನವಾಗಿರುವ 'ಕಾಂತಬೈಲು' ಎಂಬ ವಿಷಮಶೀತದ ಕಾಡು. ಚಿಕ್ಕಮಗಳೂರಿನ   ಕಾಲೇಜೊಂದರಲ್ಲಿ ಇಂಜನಿಯರಿಂಗು ಪದವಿ ಪಡೆದೆ. ನಂತರ ಬೆಂಗಳೂರಿನ ಕಾಲೇಜೊಂದರಲ್ಲಿ ಪತ್ರಿಕಾ ಡಿಪ್ಲಮಾ ಮುಗಿಸಿದೆ. ಆಗೆಲ್ಲಾ ನನ್ನೊಳಗೆ ಸೂಕ್ಷ್ಮ ಅವಸ್ಥೆಯಲ್ಲಿದ್ದ ಸಾಹಿತ್ಯ ಓದಿನ ಚಟ ಏಕಧಂ ಗಂಭೀರ ಸ್ವರೂಪ ಪಡೆಯುತ್ತಿರುವುದು ನನಗೇ ಅನುಭವಕ್ಕೆ ಬಂತು. ಆ ರೂಪ ಗಂಭೀರ ಲೇಖಕರ ಅಗಾಧ ಪ್ರಭಾವಕ್ಕೆ ಸಿಲುಕಿದೆ. ಅದರಲ್ಲಿ  ಅತಿಪಾಲು ಲೇಖಕರು ಬರಹಕ್ಕಾಗಿಯೇ ತಮ್ಮ ಬದುಕ ನೆಟ್ಟವರು. ಸಾಹಿತ್ಯದ ಆ ಓದಿನ ಪರಿಣಾಮ ಎಲ್ಲಿಗೆ ತಲುಪಿಸಿತೆಂದರೆ... ನಾಲ್ಕು ವರ್ಷಗಳ ಇಂಜಿನಿಯರಿಂಗು ಪದವಿ ಪೂರ್ತಿ ಕಾಣಲು ಏಳು ವರ್ಷ ತೆಕೊಂಡೆ! ಹೀಗೆ ಅಂದೆಲ್ಲಾ ಹಗಲು-ಕತ್ತಲೆಯ ಪರಿ ಇರದೆ ಸಾಹಿತ್ಯ ಓದಿದ ಫಲವಾಗಿ ಇಂದು 'ಓಟ್ರಾಶಿ' ಅಂಕಣ ಬರೆವಾಗ  ಬಿತ್ತುವ ಅಕ್ಷರ, ಕಟ್ಟುವ ವಾಕ್ಯ ವಾಕ್ಯಗಳ ರಸಸಿಂಬಿ ಬಿಗಿಯಾಗಿ  ಹುರಿಗೊಳ್ಳಲು ಸಾಧ್ಯವಾಗುತ್ತಿದೆ ಎಂಬುದು ತೃಪ್ತಿ.

  ಹೇಳಿದ ಹಾಗೆ, ನನ್ನ ತಾಯಿ ಕೂಡ ಬರಹದ ಪ್ರೀತಿ ಉಳ್ಳವರು. ಅವರ ಉದ್ಯೋಗ 'ಹೋಂ ಮೆನೇಜ್ಮೆಂಟ್'. ಕೊಟ್ಟಿಗೆಯ ದನಗಳ ಹಾಲುಗರೆತ. ಜತೆಗೆ ತೋಟದ ಎಂಪ್ಲಾಯಿಗಳ ಊಟ-ತಿಂಡಿ ಉಪಚಾರದ ಹೊಣೆ. ಈ ನಡುವೆ ಪುಸ್ತಕಗಳ ಓದು; ಇದಕ್ಕೆ ಸಂಬಂಧಿಸಿ ಯಾನ ಮಾಡುವುದು ತಾಯಿಯವರ ಜಾಯಮಾನ. ಜಾಣ ಓದುಗರೇ ಇಷ್ಟರಲ್ಲಿ ತಂದೆ ಕೃಷಿಕರು ಎಂದು ನೀವು ಮನಗಂಡಿರುತ್ತೀರಿ! ಇಲ್ಲಿ ನನಗೆ ವರವಾಗಿದ್ದು ಅಮ್ಮನ ನೆತ್ತರಿಂದ ಹರಿದು ಬಂದ 'ಬರೆಯುವ ಗುಣ'. ಅಪ್ಪನ  ಖರ್ಚಿನಲ್ಲಿ ಬೆಳಗಿದ ತೋಟದಾಗೆ ಒಂದಷ್ಟು 'ಭೂಮಿ ಬಳುವಳಿ'; ಅದರಲ್ಲಿ ಈಗ ನನಗೆ ಕೃಷಿ ಮಾಡುವ ತರಾತುರಿ.

  ಶಿಕ್ಷಣಕ್ಕೆ, ಉದ್ಯೋಗಕ್ಕಾಗಿ, ರೊಮೇಂಟಿಕ್ಕು ಆಸಕ್ತಿಗೆ, ಸ್ನೇಹಕ್ಕೆ, ವ್ಯಕ್ತಿ ಸಂದರ್ಶನ, ಅಲೌಕಿಕ ರುಚಿಗಾಗಿ, ಸ್ಥಳ ಕಾಣ್ಗೆ ಬಯಸಿ... ಇತ್ಯಾದಿ ನಿಮಿತ್ತ ನಾನು ಈ ಕನ್ನಡ ನಾಡಿನ ನಾಲ್ಕೂ ದಿಕ್ಕುಗಳ ಕೆಲವಷ್ಟು ಜಿಲ್ಲೆಗಳ ದರ್ಶಿಸಿರುತ್ತೇನೆ. ಹಾಗೆ ಅಲ್ಲೆಲ್ಲಾ ಸುತ್ತುವಾಗ ಜನರಾಡುವ ಭಾಷೆಯಲ್ಲಿನ ಮಾಟದ ಗುಣವಿರುವ ಪದಗಳನ್ನು ಬರಹದಲ್ಲಿ  ಆಗಮ್ಮೊ ಈಗೊಮ್ಮೆ ಸಿಡಿಸುತ್ತಿರುತ್ತೇನೆ.

  ಕಾಲ ಚಲಿಸಿದಂತೆಲ್ಲ ಪರಿಸರ, ಸಮಾಜ, ಪ್ರಕೃತಿಯಲ್ಲಿ ಉಂಟಾಗುವ ಕಂಪನವ ಇಲ್ಲಿ ಸಾದರಪಡಿಸುತ್ತೇನೆ. ಬದುಕಿನ ಕೃಷಿ, ಜೀವನದ ಸಹಜ-ಸರಳ ಖುಷಿಗೆ ಅವಕಾಶ ಈಯುವ ಸಂಗತಿಯ ಮನಗಾಣಿಸುವೆ. ಕಾಲು ಮುನ್ನಡೆದಂತೆ ಕಣ್ಣು ತೋರಿಸುವ ಅಂಶಗಳಲ್ಲಿ ಜೀವಜನ್ಯವಾದುದ ಪ್ರದರ್ಶಿಸುವೆ. ದೈತ್ಯ ಬರಹಗಾರ ಪಿ. ಲಂಕೇಶರು ಎಲ್ಲೋ ಮುದ್ರಿಸಿದ ಸಾಲು ಜ್ಞಾಪಕಕ್ಕೆ ಒತ್ತಿ ಬರುತ್ತಿದೆ; ಮನುಷ್ಯನ ಆಚಾರ-ವಿಚಾರಗಳನ್ನು ಮೃಗದ ಪಂಚೇಂದ್ರಿಯದಿಂದ ಆಸ್ವಾದಿಸಬೇಕು ಅಂತ. ಅವರ ಆ ಸಾಲಿಗೆ ಒಂದಷ್ಟು ಸಮೀಪವಾಗಿ ನನ್ನ ಜೀವದೃಷ್ಟಿಯ ಒಳಮೂಡಿಸಬಯಸುವೆ. ಅಥವಾ ಆ ರೀತಿ ಸ್ಥಿತಪ್ರಜ್ಞಾ ಮೃಗೀಯ ನಯನ ಗಳಿಸಲು ಹಂತವೇರಬಯಸುವೆ. ಅಂತಹ ಭಾವ ಸಂಚಾರ ಈ ಅಂಕಣ ಬಿಂಬಿಸಬಹುದೇನೋ... ಒಟ್ರಾಶಿ ಭೂಗೋಳದ ಪರಿಭ್ರಮಣದಾಗೆ ನಾನೂ ಗಿರಿಗಿರಿ ತಿರುಗುತ್ತಾ ಕಲಿಯುತ್ತಾ ನಲಿಯುತ್ತಾ ಬರೆಯುತ್ತಾ ಸಂಪನ್ನಗೊಳ್ಳಲು ಪ್ರಯತ್ನಶೀಲನಾಗುವೆ.

  ಭಾವುಕ, ತಕ್ಷಣ ವಾಸ್ತವ ವಾದ, ಹಠಾತ್ತನೆ ಕೋಪ, ವ್ಯೋಮ ಹಿಂದಿಕ್ಕುವ ಸಂಭ್ರಮ, ಪಾತಳ ಮುಟ್ಟುವ ಪ್ರಾಯಶ್ಚಿತ್ತದಲ್ಲಿ ಕರಗುವ ಮನಸು... ಇನ್ನಿತರ ವೈಕಲ್ಯ ಇದ್ದರೂ, ಇದನ್ನೂ ಮೀರಿದ ನೋಟವನ್ನು ಬಾಲ್ಯದಿಂದ ಉಸಿರಿಗೆ ಸಿಕ್ಕಿಸಿರುವೆ; ಸಹಮಾನವರ ಸಂಗತಿಯಲ್ಲಿ  ಜೀವ ಸಾಂಗತ್ಯದ ತಂತಿಯನ್ನು ನುಡಿಸುವುದು ನನಗಿಷ್ಟ. ಆ ತಂತಿಯ ಸ್ವರ ಮೇಳಕ್ಕೆ ನನ್ನ 'ಒಟ್ರಾಶಿ' ಅಂಕಣವಾಗಿರುತ್ತದೆ. ಆ ನಾದದ ವಿನ್ಯಾಸ -ರೆಟ್ರೋ ಆಗಿ ತೋರಬಹುದು. ಇಲ್ಲವೇ ಮಾರ್ಡನ್ ಡಿಸ್ಕೋ ತನಕ ಹೊಮ್ಮಬಹುದು.

  ವಾರ್ತಾಭಾರತಿಯಲ್ಲಿ ಪತ್ರಕರ್ತ ತರಬೇತು ಪಡೆಯುತ್ತಿದ್ದ ಆ ದಿನಗಳು ಹಸಿರಿವೆ. ಅರೆ ತಿಂಗಳಿಗೇ ಕೆಲಸದಿಂದ ಬಿಡುಗಡೆಗೊಂಡ ನನ್ನ  ನಡವಳಿಕೆಯ ಒಂದು ಪಾರ್ಶ್ವವನ್ನು ಗುರು ಸಮಾನರಾದ ಬಶೀರ್ ಸರ್ ಕಂಡವರು. ಆಗ ಬರಹದಲ್ಲೂ ಒಟ್ಟಾರೆ ಬದುಕಿನಲ್ಲೂ ಜಾಗ್ರತೆ ವಹಿಸುವ ನಿಟ್ಟಿನಲ್ಲಿ ಹೀಗೆಯೇ ಒಂದು ಸಮಯದಲ್ಲಿ ಸರ್ ಹೇಳಿದ ಮಾತು ಈಗ ಧ್ವನಿಸುತ್ತಿದೆ. ಅದೆಂದರೆ 'ತಲೆಗಿಂತ ಮುಂಡಾಸು ಭಾರವಾಗಿರಬಾರದು' ಹಾಗು 'ಗುರಿ ಸಾಧಿಸೂದು ಮುಖ್ಯವಲ್ಲ. ಸಾಧಿಸಿದ ನಂತರ ಗುರಿಯನ್ನು ನಿರ್ವಹಿಸುವ ರೀತಿ ಮುಖ್ಯ'.

  ಅಂಕಣ ಬರಹದ ತೇರು ಎಳೆಯುವಾಗ ನನ್ನ ಕೈ ಒಡಮೂಡಿಸುವ ಅಕ್ಷರ ರಚನೆಯ ಎಚ್ಚರಿಕೆಯನ್ನು ಒಂದಷ್ಟು ತಿಂಗಳು ಪತ್ರಿಕೆಗಳಲ್ಲಿ ಕೆಲಸ ಮಾಡುವಾಗ ತಿಳಿದದ್ದಿದೆ. ವಿಧ ವಿಧ ನಡಾವಳಿ, ಪ್ರಸಂಗ, ನಿರೂಪಣೆ, ಪರಿಕಲ್ಪನೆ, ಸಮಕಾಲೀನ ವಿಚಾರ... ಮತ್ತಿತರ ಭೂಮಿಕೆಯ ತಲುಪುವ ವಾಕ್ಯಗಳು ಪುಕ್ಕಟೆ ಮೋಟಿವೇಷನ್ ಸ್ಪೀಚು ಆಗಬಾರದು. ಉಗ್ರ ಪ್ರತಾಪಕ್ಕೆ ತಳ್ಳಬಾರದು. ಬರೀ ರಾಜಕೀಯ ಉಪದೇಶ-ಧಾರ್ಮಿಕ ಪ್ರವಚನ ಅನಿಸಬಾರದು. ಹರಟೆ ಕೊಚ್ಚಬಾರದು. ವರ್ಣನೆಯಲ್ಲೇ ಮುಳುಗಿಸಬಾರದು. ಗಡುಸು ವಾಸ್ತವ ಇಲ್ಲದೇ ಪೆಡಸಾಗಬಾರದು. ಪ್ರಯೋಜನಕ್ಕೆ ಬಾರದ ಹೋಲಿಕೆಯ ಎಬ್ಬಿಸಬಾರದು, ಭ್ರಾಮಕ ಓಕುಳಿ ಸ್ರವಿಸಬಾರದು... ಇಂತಾಗಿ ಬರಹಕ್ಕಿಳಿದ ನನಗೂ ಸವಾಲು!

  ಎಲ್ಲಕ್ಕಿಂತ ಮುಖ್ಯ ನನಗೆ ನಾನೇ ಖಚಿತ ಪಡಿಸಿಕೊಳ್ಳುತ್ತಿರುವೆ; ನಾನೊಬ್ಬ ಕೇವಲ ಬರಹಗಾರ ಹೊರತು ಸಮಾಜ ಸುಧಾರಕನಲ್ಲ, ರಾಜಕೀಯ ವ್ಯಕ್ತಿತ್ವ ಇರದವ, ನಟನಲ್ಲ, ಧರ್ಮ ಬೋಧನೆಯ ಪುರೋಹಿತನಲ್ಲ, ಆರ್ಥಿಕ ತಜ್ಞನಲ್ಲ, ಅಲ್ಲದೆ ಭಾಷಣಕಾರನೂ ಅಲ್ಲ.

  ಅಂಕಣ ಬರೆಯಲು ಅವಕಾಶ ಕಲ್ಪಿಸಿದ ವಾರ್ತಾಭಾರತಿ ಪತ್ರಿಕಾ ಸಮೂಹಕ್ಕೆ ವಿಶ್ವಾಸಪೂರ್ವಕ ನಮನಗಳು; ಇಲ್ಲಿಗೆ ಪೀಠಿಕೆ ಮುಗಿಸಿರುತ್ತೇನೆ. ಮುಂದಿನ ಅಂಕಣದಲ್ಲಿ ಗಟ್ಟಿ ವಿಷಯಾರಂಭದ ಜತೆ ಸಿಗುವ...