Friday, March 28, 2025

ಕವಿತೆ : ಪುನರ್ ದೇಹಿ

      

                        

                       ದೇಹದ ಹಸಿವು

                       ಮನದ ಹಸಿವು

                       ಹೊಟ್ಟೆಯ ಹಸಿವು

                       ಬುಡವಿರದ ತಳ 


                       ತೆರೆದ ಬಿಸಿಲಿಗೆ ಸೂರ್ಯ ಕಾರಣ

                       ಅದಕೆ ಹುಟ್ಟಿದ ಅಲುಗಾಟ


                       ಕಾಣಿಸದ ಕಾಡೊಳಗೆ ಹೂ ಅರಳಿತು

                       ಪೊದೆಯ ನಡುವೆ ಹಾವು ಪೊರೆ ಕಳಚಿತು

                       ದಡದ ತೂತಿಂದ ಏಡಿ ಹೊರಬಿತ್ತು

                       ಪಾತ್ರೆಯಂಚಿಗೆ ಕುಳಿತ ನೊಣ ಹಾರಿತು

                       ಫುಟ್‌ಪಾತಿನಲ್ಲಿ ಇರುವೆ ಮೃತಪಟ್ಟಿತು!


                       ‘ಹೇಳೋರಿಲ್ಲ ಕೇಳೋರಿಲ್ಲ ಕಂಡೋರಿಲ್ಲ’

                       ದೇಹ ಬೆಳೆಯುತ್ತಿದೆ ಅಂದುಕೊAಡಿದೆ

                       ಮನ ಚಾಚಿದೆ ಅನಿಸುತ್ತಿದೆ

                       ಹೊಟ್ಟೆ ತುಂಬಿದ ಹಾಗಾಗಿದೆ! 


                       ಉಬ್ಬರವಿಳಿತ ನಿಶ್ಚಲ ಆಕಾಶದ ಕೆಳಗೆ

                       ತಿಣುಕಾಟ ಹೊರಬರಲು ಉಸಿರಿಗೆ

                       ಇಂದನ್ನು ಮುಗಿಸಲು ಬದುಕಿನ ಪಾಳಿ

                       ಭೂತವನ್ನು ರಮಿಸುತ್ತಾ ನಾಳೆಯ ಊಟ!


                       ‘ಹಾಗಿದೆ ಹೀಗಿದೆ ಹೇಗಿದೆ?’ 

                       ದೇಹದ ಮಾತು ಪುನಃ ದೇಹಕ್ಕೆ!


                                      -ಅಕ್ಷಯ ಕಾಂತಬೈಲು


ಲೇಖನ ವಿಮರ್ಶೆ : ಬೀದಿ ನಾಟಕದ ಜೊತೆ ಅವಲೋಕನ

‘ಬದುಕೇ ಒಂದು ನಾಟಕರಂಗ ಕಣಯ್ಯ’ ಎಂದು ನನ್ನ ಪದವಿ ಓದಿನ ಸಂದರ್ಭದಲ್ಲಿ ನಮ್ಮ ಡಿಪಾರ್ಟುಮೆಂಟಿನ ಮುಖ್ಯಸ್ಥರು ಖಾಸಗಿಯಾಗಿ ಬಳಿ ಹೇಳಿದರು. ಮುಖ್ಯಸ್ಥರಿಗೆ ಯಾವುದೇ ಕಲಾಪ್ರೇಮ ಇರದಿದ್ದರೂ ಚಂದಗೆ ನಾಟಕೀಯ ಸಂಭಾಷಣೆ ತೂರಿದ್ದು ನನ್ನ ನೆನಪಿನ ಕವಾಟಗಳಲ್ಲಿ ಈಗಲೂ ಅಚ್ಚೊತ್ತಿದೆ ನೋಡಿ!

  ಈ ಸ್ಮರಣೆ ಯಾಕೆ ಬಂತೆAದರೆ ಕೆಲವು ದಿನಗಳ ಹಿಂದೆ ಎರಡು ಬೀದಿ ನಾಟಕಗಳನ್ನು ನೋಡುವ ಅವಕಾಶ ಸಿಕ್ಕಿದ್ದರಿಂದ. 

  ನಿಜ, ನಾಟಕವು ಗಾಢವಾಗಿ ಆವರಿಸುವ ಕಲೆ. ಇಲ್ಲಿ ಸಂಗೀತವಿದೆ, ಸಂಭಾಷಣೆಯಿದೆ. ಅಭಿನಯದ ಬಹುಪಾಲು ವಾಸ್ತವಕ್ಕೆ ಮುಖಾಮುಖಿಯಾಗುವುದರಿಂದ ಯಕ್ಷಗಾನಕ್ಕಿಂತ ನಾಟಕವು ಮನಕೆ ಇಳಿಯುವ ಅಡಿ ಆಳದ್ದಾಗಿರುತ್ತದೆ. ಅಂದರೆ ಯಕ್ಷಗಾನವೇ ಇರಲಿ, ದೊಡ್ಡಾಟವೇ ಆಗಲಿ ಅದರ ವೈಭವ ಮತ್ತು ತಲ್ಲೀನತೆಯೊಂದಿಗೆ ಗಂಭೀರತೆ ಏರುವುದು ಕೇವಲ ಪೌರಾಣಿಕ ಕಥಾ ಹಂದರವಿದ್ದರೆ ಮಾತ್ರ. 

  ಪ್ರಸಕ್ತ ವಿದ್ಯಮಾನದ ಸಂಗತಿ ಹೊಸೆದು ರೂಪಿಸಿದ ಅನೇಕ ಯಕ್ಷಗಾನ ಪ್ರಸಂಗಗಳು ಪ್ರೇಕ್ಷಕರನ್ನು ಆವರಿಸುವುದರಲ್ಲಿ ಸೊರಗಿವೆ.

  ಕಳೆದ ಕೆಲವು ವರ್ಷಗಳಿಂದ ನಾಟಕಗಳನ್ನು ನೋಡಿಕೊಂಡು ಬರುತ್ತಿದ್ದೇನೆ. ಹವ್ಯಾಸಿ, ವೃತ್ತಿಪರ, ಅಮೆಚೂರ್ ಹೀಗೆ ಅವಕಾಶ ಸಿಕ್ಕಾಗ ನಾಟಕ ತಂಡದ ಪ್ರಕಾರಗಳನ್ನು ಕಂಡಿರುವೆ. ಪ್ರೇಕ್ಷಕನಾಗಿ ಆ ತಂಡಗಳÀ ಪ್ರದರ್ಶನಗಳÀಲ್ಲಿ ಮಗ್ನಗೊಳ್ಳುತ್ತಾ ಕಲಾರಸಿಕನಾಗಿ ಎಚ್ಚರಗೊಳ್ಳುತ್ತಾ ಬಂದಿರುವೆ. 

 ಪರಿಕರ ತುಂಬಿ ಸಜ್ಜಾದ ರಂಗದ ಮೇಲಿನ ಸ್ವರಮೇಳಗಳು, ಪಾತ್ರಗಳ ಆಂಗಿಕ ಕಸರತ್ತು, ಭಾವದ ಹರಿವು ಮತ್ತು ಲೈಟಿಂಗ್ಸ್ಗಳನ್ನು ಪಂಚೇAದ್ರಿಯಗಳಿAದ ಆಸ್ವಾದಿಸುತ್ತಿದ್ದಾಗ ಇನ್ನೂ ಏನೋ ಬೇಕೆಂಬ ಚಡಪಡಿಕೆ! 

 ಆ ಚಡಪಡಿಕೆಗೆ ಉತ್ತರ; ಬೀದಿ ನಾಟಕದಲ್ಲಿದ್ದು, ಇದರಲ್ಲಿ ಬರುವ ಪಾತ್ರಗಳು ಹೆಚ್ಚಿನ ಅಲಂಕಾರವಿಲ್ಲದೆ ಮನದ ಸಹಜ ಅವಕಾಶವನ್ನು ಕಲೆಯ ಮುಕ್ತತೆಯಿಂದ ತುಂಬುವ ರೀತಿ ಯಾವುದೇ ಆಡಂಭರವಿಲ್ಲದ್ದು. ಜೊತೆಗೆ ಸರಳ ವೈಚಾರಿಕತೆಯ ಆಕರ್ಷಣೆಯೇ ಬೀದಿ ನಾಟಕ ಮೈತಾಳುವ ಬಗೆ. 

 ಗಮನಿಸಬೇಕಾದ ವಿಷಯ; ಈಗೀಗ ಬೀದಿ ನಾಟಕ ಕಾಣಸಿಗುವುದೇ ಅಪರೂಪ. ಬೀದಿಯಲ್ಲೋ ರಸ್ತೆಯಲ್ಲೋ ಸಾಮಾಜಿಕ ನ್ಯಾಯಕ್ಕಾಗಿ ಪಟ್ಟಭದ್ರ ಹಿತಾಸಕ್ತಿ ವಿರುದ್ಧ ಘೋಷಣೆ ಕೂಗಿದರೆ ಯಾರಾದರೂ ಬಂಧಿಸುವರೆAಬ ಭೀತಿ ಪ್ರತಿಯೊಬ್ಬ ಸಾಮಾನ್ಯ ನಾಗರೀಕರ ಎದೆಯಾಳದಲ್ಲಿರುವುದು ನಿಜ.    

 ರಂಗಮAಚದಲ್ಲಿ ಬೆಚ್ಚಗೆ ಪವಡಿಸಿಕೊಂಡಿರುವ ನಾಟಕವು ಬೀದಿಗೆ ಬಂತೆAದರೆ ಅಲ್ಲಿನ ಪ್ರದೇಶದ ಪ್ರೇಕ್ಷಕ ತಮ್ಮೊಳಗಿರುವ ಅಥವಾ ಬಯಸುವ ಭಾವವನ್ನು ಕಲೆಯ ಮೂಲಕ ಕಾಣಬಹುದೇನೋ ಎಂದು ತವಕಿಸುತ್ತಿರುತ್ತಾನೆ. ಬಯಲು ರಂಗದಲ್ಲೂ, ಆಡಿಟೋರಿಯಂನಲ್ಲೂ, ಬೀದಿಯಲ್ಲೂ ಪ್ರದರ್ಶನಗೊಳ್ಳುವ ನಾಟಕದ ಪಾತ್ರಗಳಿಗೆ ಪ್ರೇಕ್ಷಕ ಪ್ರತಿಕ್ರಿಯಿಸುವ ರೀತಿಯೂ ಭಿನ್ನವಾಗಿರುತ್ತದೆ.

 ಬೀದಿ ನಾಟಕ ಜಾಸ್ತಿ ಪ್ರಚಲಿತದಲ್ಲಿರುವ ರಾಜ್ಯಗಳನ್ನು ನೋಡುವುದಾದರೆ; ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಬಂಗಾಳ, ಉತ್ತರಪ್ರದೇಶ, ಮಹಾರಾಷ್ಟç ಮತ್ತು ಕರ್ನಾಟಕ. ಈ ರಾಜ್ಯಗಳ ಬೀದಿ ಬೀದಿಗಳಲ್ಲಿ ಕಲೆಯ ಸೊಗಡು ಅನುರಕ್ತಗೊಂಡಿದೆ ಎಂದು ತಿಳಿಯಬಹುದು. ಸಾಮಾಜಿಕ ಅರಿವು ಮತ್ತು ಹೋರಾಟ; ಇವು ಬೀದಿ ನಾಟಕದ ಶಕ್ತಿ. ರಾಜಕೀಯ ಅಸ್ಥಿರತೆಯೊಂದಿಗೆ ವಸಾಹತು ಆಡಳಿತದ ದಳ್ಳುರಿ ವಿರುದ್ಧ ಪ್ರತಿಭಟನೆಯ ರೂಪವಾಗಿ ೧೯೪೦ರಿಂದ ಬೀದಿ ನಾಟಕದ ರಂಗು ಭಾರತದಲ್ಲಿ ಕುಡಿಯೊಡೆಯಿತು.

 ವೃತ್ತಿಪರ ಥಿಯೇಟರ್ ನಾಟಕ ತಂಡಗಳ ಹೆಸರಿಗಿಂತಲೂ ಬೀದಿ ನಾಟಕ ತಂಡದ ಹೆಸರುಗಳು ಬಹಳ ಸ್ವಾರಸ್ಯಕರ. ‘ತಮಾಶಾ’  ಎಂಬ  ಮಹಾರಾಷ್ಟçದ ಬೀದಿ ನಾಟಕ ತಂಡ ತುಂಬಾ ಹಿಂದಿನಿAದಲೂ ಈಗಲೂ ಕೂಡ ಜೀವಂತಿಕೆ ತುಂಬಿ ಬೀದಿ ಪ್ರದರ್ಶನ ನೀಡುತ್ತಾ ಬರುತ್ತಿದೆ. ಸಫ್ದರ್ ಹಶ್ಮಿ ಅವರನ್ನು ಬೀದಿ ನಾಟಕದ ಪಿತಾಮಹ ಎಂದು ಕರೆಯಲಾಗಿದ್ದು, ಅವರು ಈ ನಾಟಕಗಳನ್ನು ಸಮಾನತೆ ಮತ್ತು ಸಾಮರಸ್ಯದ ಪ್ರತೀಕಗಳಾಗಿ ನಿರೂಪಿಸಿದರು. 

 ಇಷ್ಟೆಲ್ಲಾ ನಾನು ಹೇಳ ಹೊರಟಿದ್ದು ಕೆಲವು ವಾರಗಳ ಹಿಂದೆ ಎರಡು ಬೀದಿ ನಾಟಕಗಳನ್ನು ನೋಡಿದ ಸಲುವಾಗಿ. ಬಹುಭಾಷಾ ನಟ ಪ್ರಕಾಶ್ ರಾಜ್ ನೇತೃತ್ವದ ನಿರ್ದಿಗಂತ ಸಂಸ್ಥೆ ಹಾಗೂ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಆಯೋಜಿಸಿದ ‘ನಾವು ಯಾವಾಗ ಬದಲಾಗುತ್ತೇವೆ’ ಮತ್ತು ‘ಈಗ ಹೇಳಿ ನಾವೇನ್ಮಾಡೋಣ’ ಎಂಬ ಬೀದಿ ನಾಟಕಗಳು ಮಂಗಳೂರಿನಲ್ಲಿ ಪ್ರದರ್ಶನಗೊಂಡವು. 

  ಈ ನಾಟಕವನ್ನು ಅಲೋಶಿಯಸ್ ಕಾಲೇಜು ಅಂಗಳದಲ್ಲಿ ಆಡಲಾಗಿದ್ದು, ಪ್ರೇಕ್ಷಕರನ್ನೂ ಕೂಡ ನಾಟಕದ ಭಾಗವಾಗಿ ಕುಣಿಸಿರುವುದು ಉಂಟಲ್ಲಾ; ಅದು ಬೀದಿ ನಾಟಕದ ಚೈತನ್ಯ. 


 ಪುತ್ತೂರಿನ ಸಂಸಾರ ತಂಡದವರ ‘ನಾವು ಯಾವಾಗ ಬದಲಾಗುತ್ತೇವೆ’ ಎಂಬ ನಾಟಕದ ಕೇಂದ್ರ ನಿರೂಪಣೆಯು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಮೈತಳೆದಿತ್ತು. ನಾಟಕದ ಪಾತ್ರಧಾರಿಗಳು ಅತ್ಯಲ್ಪ ಸಂಭಾಷಣೆಯಲ್ಲಿ ತೊಡಗಿದ್ದರೂ ಬಹುಪಾಲು ಹಾಡು ಕುಣಿತದ ಮೂಲಕ ಮಾತನಾಡಬೇಕಾದ ವಿಷಯಗಳನ್ನು ಪ್ರದರ್ಶಿಸಿದರು. ಇಲ್ಲಿನ ಕಲಾವಿದರು ಆಂಗಿಕ ಅಭಿನಯ ಮತ್ತು ದೈಹಿಕ ಸೂಕ್ಷö್ಮಗಳಿಗೆ ಒತ್ತು ಕೊಟ್ಟಂತಿರಲಿಲ್ಲ. ಅದರೂ ಬೀದಿ ನಾಟಕಗಳೇ ಅಪರೂಪ ಅನಿಸುವ ಈ ಕಾಲದಲ್ಲಿ  ‘ಮನುಜ ನೀ ಮನುಜನಿಗೆ ಅಭಯ ನೀಡಯ್ಯ’ ಗೀತೆಯು ಪ್ರೇಕ್ಷಕರನ್ನು ಸೆಳೆಯಿತು. 

 ಷಂಶುದ್ದೀನ್, ಭವಾನಿ, ಅರ್ಪಿತಾ, ಮಿಥುನ್ ಸೋನಾ, ಕೃಷ್ಣಪ್ಪ ಬೆಂಬಿಲ ಮೊದಲಾದ ಕಲಾವಿದರ ಗಣ ‘ನಾವು ಯಾವಾಗ ಬದಲಾಗುತ್ತೇವೆ’ ನಾಟಕದ ಪಾತ್ರವಹಿಸಿದ್ದರು. 

  ಎರಡನೇ ಬೀದಿ ನಾಟಕವೆಂದರೆ ‘ಈಗ ಹೇಳಿ ನಾವೇನ್ಮಾಡೋಣ’. ಇದನ್ನು ಜೋಡುಮಾರ್ಗದ ಸಂಸಾರ ತಂಡದವರು ಅಭಿನಯಿಸಿದರು. ಇದರಲ್ಲಿನ ಪಾತ್ರವರ್ಗದ ಆಯ್ಕೆಯಲ್ಲಿ ನಿರ್ದೇಶಕರ ಮುತುವರ್ಜಿ ಎದ್ದುಕಾಣುತ್ತಿತ್ತು. ಕೊಳ್ಳಿ ದೈವ ಮತ್ತು ಮಾರಿ ಭೂತಗಳು ಸಜ್ಜನಿಕೆಯ ವೇಷ ಧರಿಸಿ ಸಮಾಜದಲ್ಲಿ ಸೇರಿಕೊಳ್ಳುತ್ತವೆ. ನಂತರ ಆ ಸಜ್ಜನಿಕೆಯ ವೇಷಗಳು ಜನರಿಗೆ ಹೇಗೆಲ್ಲಾ ಪಾತಕಗಳನ್ನು ಉಂಟುಮಾಡಲು ಪ್ರಚೋದಿಸುತ್ತವೆ ಎಂಬುದು ಈ ಬೀದಿ ನಾಟಕದ ಕಥಾ ತಿರುಳು. ಇಂತಹ ದೈವ ಭೂತಗಳನ್ನು ಸಮಾಜದ ನಡುವಿನಿಂದ ಅಟ್ಟಿಸಿ ಎಂಬುದೇ ‘ಈಗ ಹೇಳಿ ನಾವೇನ್ಮಾಡೋಣ’ದ ಕ್ಲೆöÊಮಾಕ್ಸ್. 


  ನಾಟಕದ ಹಿನ್ನೆಲೆಯ ಚೆಂಡೆ ವಾದನ ಬೀದಿಯ ಕಲಾ ಪ್ರದರ್ಶನಕ್ಕೆ ಹುರುಪು ಕೊಟ್ಟಿತ್ತು. ‘ಕೊಳ್ಳಿ ದೈವವೂ ಮಾರಿ ಭೂತವೂ ಹೊರಟವು ಜನರ ನಡುವಿನಲಿ’ ಎಂಬ ಪದ್ಯಕ್ಕೆ ಪ್ರೇಕ್ಷಕರನ್ನು ಎದ್ದು ನರ್ತಿಸಿದರು. ಪ್ರಜ್ವಲ್, ಅಶ್ವಿನಿ, ಸಿಂಧು, ತೃಪ್ತಿ, ಯಶಸ್, ವಿಷ್ಣುಗುಪ್ತ, ರಾಕೇಶ್, ಪೃಥ್ವಿರಾಜ್, ಮೌನೇಶ ಮೊದಲಾದವರು ‘ಈಗ ಹೇಳಿ ಏನ್ಮಾಡೋಣ’ದಲ್ಲಿ ಪಾತ್ರವಹಿಸಿದ್ದರು. 

 ಇಂದಿನ ಸಮಾಜದ ಕೊರಕಲುಗಳನ್ನು ಎತ್ತಿ ತೋರಿಸಲು ಹಾಗೂ ಮಾನವೀಯ ಜೀವಂತಿಕೆಯನ್ನು ಉಳಿಸಿ ಸಾರ್ವಜನಿಕ ಅರಿವು ಮೂಡಿಸಲು ಬೀದಿ ನಾಟಕಗಳು ಉಳಿಯಬೇಕಿದೆ, ಉಳಿಸಬೇಕಿದೆ ಎಂಬುದೇ ನಮ್ಮನಿಮ್ಮೆಲ್ಲರ ಆಶಯವಾಗಲಿ.


                                     -ಅಕ್ಷಯ ಕಾಂತಬೈಲು

ಕವನ: ಪಾಪು ಮುದ್ದಾಗಿದೆ!

 

                      ಮೆಸೆಂಜರ್ ಠಣ್ ಅಂದಿತು

                      ಪ್ಯಾಟರ್ನ್ ಲಾಕ್ ಸವರಿತು

                      ಮೊಬೈಲ್ ಪರದೆ ಬಿಚ್ಚಿತು

                      ‘ಏನಾದರೂ ಹೇಳು

                      ಇದೇ ಲಾಸ್ಟ್. ನಾನಿನ್ನು ಕೇಳಲ್ಲ’

                      ವಾಕ್ಯ ಹರಡಿತು


                      ಹುಟ್ಟಿಗೆ ಫಸಲು ಕುಯ್ಯುವ ತವಕ

                      ತ್ರಾಣವಿದ್ದರೆ ಇನ್ನೊಬ್ಬರ ಹೊಂದಿಕೆ

                      ಇನ್ನೊಂದು ಜೀವದ ಕರೆ

                      ‘ನಿನ್ನ ಕೈಲಿ ಸಾಧ್ಯವಿದೆ’ ಎಂಬ ಹೊದಿಕೆ

                      ನಿರಂತರ ಸ್ಪರ್ಶ ದುಡ್ಡಿನ ತೇಲುವಿಕೆ

                      ಅನಿಯಂತ್ರಿತ ನಗು ಹರಟೆ ಸುಖ ಜಾಹೀರು

                      ದಶದಿಕ್ಕಿಂದ ಬಳಕೆ ಪೂರೈಕೆ!


                      ‘ನಮ್ಮದು ಹಾಗಲ್ಲ ಬಚ್ಚಿಟ್ಟ

                      ಯಾವದೋ ಪ್ರೇಮಗಳು ಸತ್ತರೂ 

                      ನೀನಂತೂ ಯಾವತ್ತೂ ಬೆಚ್ಚಗೆ ಇರುತ್ತೀ’

                      ದಾಟಿ ಬಂದ ಲಾಗಾಯ್ತಿನ ಮಾತು

                      ಕಾಲದ ರಂಗೋಲೆಗೆ ಅನೇಕ ಚುಕ್ಕಿಗಳು

                      ಧರಿಸುವ ಹೊಳಪಿಗೆ ಮರೆತ ವಯಸು


                      ಈ ರೀಲ್ಸ್ ನೋಡು

                      ಆ ಡ್ರೆಸ್ಸು ಆ ಫೇಸು ಆ ಸ್ಟೆಪ್ಪು ಆ ಟಾಕು

                      ಆ ಎಲ್ಲವೂ ಎದೆಗೆ ಹತ್ತಿರ

                      ಕಾಪಿಟ್ಟ ಹಂಬಲಿಕೆಯ ಮೊಹಬತ್ತ್

                      ವಿಸರ್ಜನೆಗೆ ಕೂತರೂ ಚಿತ್ತರಂಗದ ಮಾಟ

                      ಪೊಸ್ಟಿಗೊಂದು ಹಾರ್ಟ್ ಒತ್ತಿದಾಗ

                      ನಮ್ಮಿಬ್ಬರ ದೇಹ ಸೋಫಾದ 

                      ಮೂಲೆಗೊತ್ತಿದ ಅಂತರ!


                      ಆ ನಂತರ ಮಾಡಿದ್ದು ತಿನ್ನುವ ಆತುರ

                      ಯೂಟ್ಯೂಬ್ ಅಡುಗೆ ಚಾನಲ್ಗೆ

                      ಒತ್ತಿದ ಬೆಲ್ ಬಟನ್

                      ಮುಸುರೆ ತಿಕ್ಕೋಕೆ

                      ಬರಬೇಕಷ್ಟೆ ರಂಗೂಸ್ ಕಿಚನ್ನ್

                      ಒಂದು ಜತೆ ಅನೇಕ ಕತೆ

                      ಅನುಭವಕ್ಕೆ ಭದ್ರತೆಯ ಆಫರ್

                      ಹೇಳತೋಚದ ಪಾಪಿ ಭಾವಗಳು

                      ಬಿಡದಂತೆ ಅನೇಕ ತುಂಬಿಸುವಾಗ 

                      ಪೂರ್ವದ ಹಂಗಿಗೆ ಪ್ರಸವ

                      ‘ನಿಮ್ಮ ಪಾಪು ಎಷ್ಟು ಮುದ್ದಾಗಿದೆ’ 

                      ಎಂಬ ಅಕ್ಕಪಕ್ಕ! 


                                      -ಅಕ್ಷಯ ಕಾಂತಬೈಲು

Wednesday, March 12, 2025

ಪ್ರವಾಸ ಲೇಖನ: ಮಹಾಕುಂಭ ಯಾತ್ರಾ ಕಥನಮೇಳ

ಹಿಂದೂ ಧರ್ಮದ ಆಚಾರ ನಂಬಿಕೆಯ ಮೇಲಿನಿಂದ ಕುಂಭಮೇಳದ ಬಗ್ಗೆ ಆಸ್ತೆಯಿಟ್ಟು ಈಗಾಗಲೇ ವಿವಿಧ ಮಾಧ್ಯಮಗಳ ಮುಖಾಂತರ ತಿಳಿದೇ ಇರುತ್ತೀರಿ.

 ಹಾಗಾಗಿ ನಾನೂ ಕೂಡ ಇಲ್ಲಿ ಆವರ್ತಿತವಾಗಿ ಕುಂಭದ ‘ದೀರ್ಘ’ ಐತಿಹ್ಯ ಪುರಾಣ ಬಿಚ್ಚಿಡುವ ಅವಶ್ಯಕತೆ ಹೆಚ್ಚಾಗಿಲ್ಲವೆಂದು ಭಾವಿಸುವೆ. ಆದರೆ ಮಹಾಕುಂಭ ಮೇಳ ನೋಡಲು ಉತ್ತರಪ್ರದೇಶದ ಪ್ರಯಾಗರಾಜ್‌ಗೆ ಹೋಗಿಬಂದ ನನ್ನ ಅನುಭೂತಿಯನ್ನು ಮಾತ್ರ ಹಂಚಿಕೊಳ್ಳಬಯಸುವೆ. ಭಕ್ತಿ, ಆರಾಧನೆ, ಸಂಸ್ಕಾರ, ವೈಜ್ಞಾನಿಕತೆ ಹಾಗೂ ಸಾಮಾನ್ಯ ಜ್ಞಾನದ ಕಾರಣ ಕುಂಭಕ್ಕೆ ಯಾತ್ರೆ ಹೋಗಿದ್ದವರ ಅನುಭವ ತೆರತೆರನಾಗಿರಬಹುದು. 

 ಗಂಗಾ-ಯಮುನಾ ಹಾಗೂ ಸರಸ್ವತಿ(ಅದೃಶ್ಯ ನದಿ) ಈ ತ್ರಿವಳಿ ನದಿಗಳ ಸಂಗಮದಲ್ಲಿ ಮಿಂದೆದ್ದವರ ದೈವಿಕತೆಯು ಶಿರದ ನೆತ್ತಿಯಿಂದ ಇಳಿಯಲು ಜನ್ಮಪೂರ್ತಿ ಕಳೆದರೂ ಸ್ಥಾಯಿಯಾಗಿದ್ದು, ಕುಟುಂಬದ ಮುಂದಿನ ಪರಂಪರೆ ನೆನೆಯುವಷ್ಟು ಈ ವಿರಾಟ್ ಕುಂಭದ ಶಾಹಿ ಸ್ನಾನಗಳು ಬಹಳ ದೊಡ್ಡದು ಎಂಬುದು ಗ್ರಹಗತಿ ದೃಷ್ಟಿಯಿಂದ ಭಕ್ತಿಪರವಶರ ನಂಬಿಕೆ.

 ಇದು ಮೂರು ವರ್ಷಕ್ಕೊಮ್ಮೆ ಘಟಿಸುವ ಅರ್ಧ ಮೇಳವಲ್ಲ! ಆರು ವರ್ಷಕ್ಕೆ ಸರ್ತಿ ಬರುವ ಸಾದಾ ಕುಂಭವಲ್ಲ! ಇದು ಮಹಾ! ೧೪೪ ವರ್ಷಕ್ಕೊಮ್ಮೆ! ದಿನಂಪ್ರತಿ ಲಕ್ಷಗಟ್ಟಲೆ ಜನ! ೧೦,೦೦೦ ಎಕ್ರೆ ಪ್ರದೇಶ ಮೇಳದ ಹರವು! ಗಂಗಾ ಸಂಗಮದಲ್ಲಿ ನಕ್ಷತ್ರ ಪಥ ಆಧರಿಸಿ ಆರು ಶಾಹಿ ಸ್ನಾನಗಳು... ಇತ್ಯಾದಿ ವಿವರಗಳೇ ನನ್ನೊಳಗಿನ ಪುಳಕಕ್ಕೆ ಕಾರಣ. ಈ ಬೃಹತ್‌ಮೇಳ ಜಮಾಯಿಸುವ ಪ್ರಯಾಗಕ್ಕೆ ಹೋಗುವ ಬಯಕೆ ಮತ್ತೂ ಹೆಚ್ಚಲು ಕಾರಣ; ಬಾಲ್ಯಕಾಲದಿಂದ ಕೇವಲ ಚಿತ್ರಫೋಟೋಗಳಲ್ಲಿ ನಾಗಸಾಧು, ಅಘೋರಿಗಳನ್ನು ನೋಡಿ ಗೊತ್ತಷ್ಟೆ, ಇಲ್ಲಿ ಅಸಲಿ ಕಾಣಸಿಗುತ್ತಾರೆಂಬ ಕಾತರ. ಹೀಗಾಗಿ ಮಹಾಕುಂಭಕ್ಕೆ ಹೋಗಲು ನಿರ್ಧರಿಸಿದೆ.

ಹೊರಡಲು ಸಿದ್ಧತೆ: ನಿತ್ಯದ ಪರಿಕರ ಹಾಗೂ ಆದಷ್ಟು ಕಮ್ಮಿ ಬಟ್ಟೆಬರೆ, ಹೆಗಲಿಗೆ ಹಾಕುವ ಬ್ಯಾಗೊಂದರಲ್ಲಿ ತುಂಬುವಷ್ಟು ನನ್ನ ಪ್ರಯಾಣದ ಸಾಥಿಯಿರಬೇಕೆಂದು ತಯಾರಾದೆ. 

 ಸಂಗಮದಲ್ಲಿ ಸ್ನಾನ ಮಾಡಬೇಕಾದರೆ ಕಳಚಲು, ಮೈವೊರೆಸಲು, ಉಡಲು ಸುಲಭವಾಗುವುದರ ಜೊತೆಗೆ ದೈವೀ ಉತ್ಸವಕ್ಕೆ ತಕ್ಕುದಾಗಲು ಕೇಸರಿ ಬಣ್ಣದ ಲುಂಗಿ, ಕುರ್ತ, ದುಪಟ್ಟಾ ಆರಿಸಿದೆ. ರಾತ್ರಿ ಎಲ್ಲಿ ಉಳಕೊಳ್ಳುವುದೆಂಬ ನಿರ್ಧಾರವಿರಲಿಲ್ಲ. ಸಂಗಮ ಪ್ರದೇಶದಲ್ಲಿ ಸ್ಥಳ ಸಿಕ್ಕಲ್ಲಿ ಮಲಕ್ಕೊಳ್ಳುವುದೆಂಬ ಉದ್ದೇಶಕ್ಕೆ ಒಂದೇ ಜೊತೆ ನೈಟ್ ಪ್ಯಾಂಟ್ ಶರ್ಟು ಎತ್ತಿಕೊಂಡೆ. ಎಷ್ಟು ದಿನ ಪ್ರಯಾಗದಲ್ಲಿರುವುದೆಂಬ ಖಚಿತತೆಯಿರಲಿಲ್ಲ. 

 ‘ಚಳಿ ಉತ್ತರ ಪ್ರದೇಶದಲ್ಲಿ ಜೋರಿದೆ’ ಅಂತ ಅವರಿವರಿಂದ ಗೊತ್ತಾಗಿ ಆದಷ್ಟೂ ಹಗುರವಿರುವ ಜರ್ಕಿನ್ ಇಟ್ಟುಕೊಂಡೆ. ಜೊತೆಗೆ ಕುಂಭಮೇಳವಲ್ಲದೆ, ರೈಲು ಪ್ರಯಾಣದಲ್ಲಿಯೂ ಸಹ ಮಲಗುವಾಗ ಹೊದೆಯಲು ಅನುಕೂಲವಾಗುವಂತೆ; ತಲೆಯಿಂದ ಮೊಣಕಾಲಿನಷ್ಟಕ್ಕೆ ಉದ್ದವಿರುವ ಶಾಲೊಂದನ್ನು ತೆಗೊಂಡಿದ್ದೆ. 

 ಇವಿಷ್ಟನ್ನು ತುಂಬಿದ್ದ ಬ್ಯಾಗನ್ನು ಹೆಗಲಿಗೇರಿಸಿ ಮಡಿಕೇರಿಯ ಚೆಂಬು ಗ್ರಾಮದ ಕಾಂತಬೈಲಿನಿAದ ಏಕಾಂಗಿಯಾಗಿ ಮಹಾಕುಂಭಕ್ಕೆ ಪ್ರಯಾಣ ಶುರುವಿಟ್ಟೆ. ಅಂದು ಫೆ.೫ ಮಂಗಳವಾರ.

ಪ್ರಯಾಣ ಶುರು: ಜ.೧೩ರಿಂದ ಫೆ.೨೬ರ ತನಕ ನಡೆದ ಪ್ರಯಾಗರಾಜ್‌ನ ಮಹಾಕುಂಭ ೨೦೨೫ರ ಘೋಷವಾಕ್ಯ ‘ಭವ್ಯ ಕುಂಭ! ದಿವ್ಯ ಕುಂಭ!’. ಬೆಂಗಳೂರಿನಿAದ ರೈಲು ಹಿಡಿದು ಪ್ರಯಾಗಕ್ಕೆ ಪ್ರಯಾಣ ಮಾಡುವುದೆಂದು ಮೊದಲೇ ನಿಶ್ಚಯಿಸಿಕೊಂಡಿದ್ದೆ. 

 ಮೌನಿ ಅಮಾವಾಸ್ಯೆ ಐದನೆ ಶಾಹಿ ಸ್ನಾನದ ಸಲುವಾಗಿ ಸಂಗಮ ತಟಕ್ಕೆ ಲಕ್ಷಾಂತರ ಸ್ನಾನಾರ್ಥಿಗಳು ನಡುರಾತ್ರಿ ೧೨ರ ಆಸುಪಾಸಿನ ವೇಳೆ ಒಮ್ಮಿಂದೊಮ್ಮೆಲೆ ಎರಗಿ ಕಾಲ್ತುಳಿತ ಘಟಿಸಿತ್ತು. ಪರಿಣಾಮ ಮೂವತ್ತಕ್ಕೂ ಮಿಕ್ಕಿ ಸಾವು ಸಂಭವಿಸಿದ ಭೀಕರತೆ ನನ್ನೊಳಗೆ ಕುಂಭದ ಸಲುವಾಗಿ ಭೀತಿಯನ್ನೂ ಸೃಷ್ಟಿಸಿತ್ತು. ಹಾಗಾಗಿ ಶಾಹಿ ಸ್ನಾನವಿರದ ದಿನ; ಅಲ್ಲದೇ ವಾರಾಂತ್ಯವಲ್ಲದ ನಡುವಿನ ದಿನ ಕುಂಭ ತಲುಪುವ ಗುರಿ ನನ್ನದಿತ್ತು. 

 ಬೆಂಗಳೂರಿನಿAದ ಉತ್ರರಪ್ರದೇಶದ ಪ್ರಯಾಗಕ್ಕೆ ಹೋಗುವ ‘ಸಂಗಮಿತ್ರ ಎಕ್ಸ್ಪ್ರೆಸ್’ ರೈಲಿನ ಮೇಲ್ದರ್ಜೆ ಬೋಗಿಗಳು ಅದಾಗಲೇ ಫೆಬ್ರವರಿ ತಿಂಗಳು ಪೂರ್ತಿ ಬುಕ್ ಆಗಿದ್ದರಿಂದ ಜನರಲ್ ಬೋಗಿಯಲ್ಲಾದರೂ ಹೋಗಿಯೇ ತೀರುತ್ತೇನೆಂದು ಮೊದಲೇ ನಿರ್ಧರಿಸಿದ್ದೆ. ಇಲ್ಲಿ ಬಂದು ಬೈಯಪ್ಪನಹಳ್ಳಿ ಬಳಿಯ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ ನೋಡುತ್ತೇನೆ, ಎಂಥಾ ಜನದಟ್ಟಣೆ! 

 ರೈಲು ಟಿಕೆಟ್ ಕೊಳ್ಳುವಾಗ ಕೌಂಟರಿನವರು ‘ಕುಂಭಮೇಳಕ್ಕೆ ಹೊರಟಿದಿರಾ! ಜನರಲ್‌ನಲ್ಲಿ ಅಪ್ಪಚ್ಚಿಯಾಗಾಕೆ ರೆಡಿಯಿದಿರಾ? ಜನ ಸಿಕ್ಕಾಪಟ್ಟೆ ತುಂಬಿರ್ತಾರೆ ನೋಡಿ’ ಎನ್ನುತ್ತಾ ೫೧೦ರೂಪಾಯಿಯ ಜನರಲ್ ಬೋಗಿ ಟಿಕೆಟ್ ಕೈಗಿತ್ತರು. 

 ಸಂಗಮಿತ್ರ ರೈಲು ಬೆಳಗ್ಗೆ ೯:೩೦ಗೆ ಬೆಂಗಳೂರು ಬಿಟ್ಟರೆ ತಮಿಳುನಾಡು, ಮಹಾರಾಷ್ಟç, ತೆಲಂಗಾಣ, ಆಂಧ್ರ, ಮಧ್ಯಪ್ರದೇಶ ಮೂಲಕ ಹಾದು ಉತ್ತರಪ್ರದೇಶದ ಪ್ರಯಾಗ ಮುಟ್ಟುವುದು. ಎರಡು ಹಗಲು ಮೂರು ರಾತ್ರಿಗಳ ಪಯಣ. ಇನ್ನೂ ನಿಲ್ದಾಣಕ್ಕೆ ರೈಲು ಬರಲು ಒಂದೂಮುಕ್ಕಾಲು ತಾಸು ಬಾಕಿಯಿತ್ತು. ನಾಶ್ತಾ ಮಾಡಿ ಬರೋಣವೆಂದು ವಿಶ್ವೇಶ್ವರಯ್ಯ ಸ್ಟೇಶನ್ ಕೆಳಭಾಗದ ರಸ್ತೆಯುದ್ದಕ್ಕೂ ಸಾಲಾಗಿದ್ದ ಡಾಬಾಗಳ ಕಡೆ ಹೊರಟೆ. 

 ‘ಸ್ಲೀಪರ್ ಕೋಚ್‌ಕಾ ಟಿಕೆಟ್ ಚಾಯಿಯೇ? ಪ್ರಯಾಗ್‌ರಾಜ್‌ಕೋ ಜಾತೇ ಹೊ? ಸಂಗಮಿತ್ರಕಾ ರಿಸರ್ವ್ವೇಶನ್ ಕರ್‌ದೂಂಗ’ ಎಂದು ಗುಪ್ತಗುಪ್ತವಾಗಿ ಪ್ರಯಾಣಿಕರ ಮೂತಿಭಾವ ನೋಡುತ್ತಾ ಕೂಗುಕರೆಯುವ ಯುವಕ ಅಲ್ಲೆಲ್ಲಾ ಗುಸುಗುಸು ಮಾಡುತ್ತ ತಿರುಗುತ್ತಿದ್ದ. ಯಾಕೆ ನಾನು ಜನರಲ್ ಬೋಗಿಯ ಜನಮಂದೆಯಲ್ಲಿ ಸತ್ತುಕೊಂಡು ಎರಡುವರೆ ದಿನ ಪ್ರಯಾಣಿಸಬೇಕು’ ಅಂತನಿಸಿತು. ಆ ಯುವಕನಿಗೆ ನನ್ನ ಯಾತ್ರೆಯ ಹಿನ್ನೆಲೆಯೊದಗಿಸಿ ಸ್ಲೀಪರ್ ಟಿಕೆಟ್ ಇನ್ನರ್ಧ ತಾಸಿನೊಳಗೆ ಸಿಗುವುದೋ ಎಂದು ಕೇಳಿದಾಗ ತನ್ನ ಹಿಂದೆ ಬನ್ನಿ ಎಂದು ಕರೆದುಕೊಂಡು ಹೋದ. ಅವ ಕರಕೊಂಡು ಹೋದದ್ದು ರೇಲ್ವೆ ಸ್ಟೇಶನ್‌ಗೆ ಹತ್ತಿರವೇ ಇದ್ದ ಸಣ್ಣ ಇಕ್ಕಟ್ಟಾದ ಟಿಕೆಟ್ ಬುಕಿಂಗ್ ಏಜೆಸ್ಸಿ ಕಛೇರಿಗೆ. ಅಲ್ಲಿ ರಿಸರ್ವ್ ಮಾಡಿಸುತ್ತೇನೆ ಅಂತ ಈ ಏಜೆಸ್ಸಿ ಯುವಕನ ಮಾತಿಗೆ ತಲೆಯೊಪ್ಪಿಸಿ ನನ್ನಂತೆಯೇ ಬಂದ ನಾಕಾರು ಜನ ಉತ್ತರ ಭಾರತ ಭಾಗದ ಹುಡುಗರು ನಿಂತಿದ್ದರು. ಅವರಲ್ಲಿ ಕೆಲವರು ಕಲ್ಕತ್ತದ ಹೌರಾಕ್ಕೂ, ಉತ್ತರಪ್ರದೇಶದ ದಾನಪುರಕ್ಕೂ ಹೋಗುವವರಿದ್ದರು. 

 ‘೧೫೦೦ ದೇನಾ... ಆಧಾರ್ ಕಾರ್ಡ್ ದಿಖ್‌ನಾ’ ಅಂತೆಲ್ಲಾ ಬುಕಿಂಗ್ ಏಜನ್ಸಿ ಯುವಕ ಕೇಳಿದ್ದಕ್ಕೆ ಕೊಟ್ಟು ತೋರಿಸಿಯಾಯ್ತು. ತಲೆಯೆತ್ತಿ ಒಮ್ಮೆ ಆ ಏಜೆನ್ಸಿ ಕಚೇರಿಯ ಹೆಸರಿನ ಬೋರ್ಡ್ ನೋಡುತ್ತೇನೆ, ಸಂಪರ್ಕ ಸಂಖ್ಯೆ ನಮೂದಿಸಿದ ಮೊಬೈಲ್ ನಂಬ್ರದ ಕೊನೆಯ ಐದು ಸಂಖ್ಯೆಗಳಿದ್ದಲ್ಲಿ ಬೋರ್ಡ್ಗೆ ತೂತ ಕೊರೆಯಲಾಗಿತ್ತು! ಅಂತರAಗ ಹೇಳುತ್ತಿದೆ ‘ಮೋಸ ಹೋದೆ’. ಆದರೆ ಬಹಿರಂಗ ನೆನಪಿಸಿತು; ಸಿನಿಮಾ ಥೇಟರಿನ ಬ್ಲಾö್ಯಕ್ ಟಿಕೆಟ್ ದಂಧೆಗಳೆಲ್ಲಾ ಹೀಗೆ ನಡೆಯುವುದಲ್ಲವೇ. ಹೊರಗೆ ಹೌಸ್‌ಫುಲ್ ಫಲಕ ಹಾಕಿದ್ದರೂ ಒಳಗೆ ಏಳೆಂಟು ಸೀಟು ಲಾಭಿಗಾಗಿಯೇ ಮುಡಿಪು!

 ಇನ್ನೇನು ರೈಲು ಬರಲು ಕಾಲು ಗಂಟೆಯ ಸಮೀಪ. ಆಗ ರಿಸರ್ವ್ ಅಂತೆನೋ ಮಾಡಿದ ಜೆರಾಕ್ಸ್ ಹಾಳೆಯೊಂದನ್ನು ಏಜನ್ಸಿ ಯುವಕ ಕೊಡುತ್ತಾ ‘ವಿಶಾಖಪಟ್ಟಣದ ತನಕ ಸ್ಲೀಪರ್ ಬುಕ್ ಆಗಿದೆ. ಅಲ್ಲಿಂದ ಮುಂದೆ ಪ್ರಯಾಗಕ್ಕೆ ಹೋಗುವ ಕನ್‌ಫಾರ್ಮೇಶನ್ ಮೆಸೇಜು ನಿಮ್ಮ ಮೊಬೈಲಿಗೆ ಬರುತ್ತದೆ’ ಎಂದ. ಆತನ ಬಳಿ ನನ್ನ ಕುರಿ ನಾಲಗೆಯೆತ್ತಿ ‘ನೀನು ಮೋಸ ಮಾಡಿದೆ ಲೋಫರ್!’ ಎಂದು ಜಗಳವಾಡುವ, ಇಲ್ಲವೇ ಆ ಟಿಕೆಟ್ ಏಜೆನ್ಸಿ ಮೇಲೆ ಪೋಲಿಸ್ ಕಂಪ್ಲೇAಟ್ ಕೊಡುವಷ್ಟು ಸಮಯವಕಾಶ ಇರಲಿಲ್ಲ. ಅಲ್ಲೇ ಪಕ್ಕದಲ್ಲಿ ಬಕಬಕನೆ ಏನೋ ತಿಂದು ರೇಲ್ವೆ ಸ್ಟೇಶನ್‌ಗೆ ಓಡಿದೆ. ಆಗಲೇ ಸಂಗಮಿತ್ರ ಎಕ್ಸ್ಪ್ರೆಸ್ ಜನತುಂಬಿಸುತ್ತಿತ್ತು.

 ಒಂದೆಡೆ ಈ ಹಾಳು ರಿಸರ್ವ್ವೇಶನ್ ಕತೆಯಿಂದ ಕಿಡಿಗೊಳ್ಳುತ್ತಾ; ಏಜನ್ಸಿಯವನ ಪರ್ಕಟ್ ಸ್ಲೀಪರ್ ಟಿಕೆಟ್ ಜೆರಾಕ್ಸ್ ಕಡೆ ನೋಡುತ್ತಾ, ಮತ್ತೊಂದೆಡೆ ಬೋಗಿಯೂ ನೋಡುತ್ತಾ ಅಂತೂ ನಿರ್ದಿಷ್ಟ ಕೋಚ್ ಹಿಡಿದು ನಿರ್ದಿಷ್ಟ ಆಸನದ ಕಡೆ ಹುಡುಕಹೋದೆ.

ಸಂಗಮಿತ್ರ ಎಕ್ಸ್ಪ್ರೆಸ್ ಸಂಚಾರ: ಲೋವರ್ ಬರ್ಥ್ ಸೀಟು ನಂಬ್ರ ೯ ನಾನು ಕೂರಬೇಕಾಗಿದ್ದು. ನೋಡಿದರೆ ಆ ಸೀಟು ಸಹಿತ ಇಡೀ ಬರ್ಥ್ನಲ್ಲಿ ಯುವಕರ ಗುಂಪು! ಟಿಕೆಟ್ ಏಜನ್ಸಿಯವ ಇಟ್ಟೆಯಲ್ಲೋ ಗೂಟ ಎಂದುಕೊAಡೆ. ಮಜವಾಗಿ ಹರಟುತ್ತಿದ್ದ ಆ ಯುವಕರ ಕಡೆ ‘ಸೀಟು ನಂಬರ್ ೯ ನನ್ನದು’ ಎಂದೆ. ಪ್ರಮಾಣಕ್ಕೆ ಏಜನ್ಸಿಯವ ಕೊಟ್ಟ ಟಿಕೆಟ್ ಜೆರಾಕ್ಸ್ ಕಾಪಿ ಮುಂದಿಟ್ಟೆ.

 ‘ಬ್ರದರ್ ನಾವೆಲ್ಲ ಇಲ್ಲಿಂದ ಬಿಹಾರದ ಪಟ್ನಾಕ್ಕೆ ಮ್ಯಾರೆಜ್ ಪಂಕ್ಷನ್‌ಗೆ ವಿಥ್ ಫ್ಯಾಮಿಲಿ ಹೋಗ್ತಿದೀವಿ. ಈ ಬರ್ಥ್ ಎಲ್ಲಾ ನಮ್ಮೋರೆ ಇರಬೇಕೂಂತ ಬ್ರದರ್. ಕರೆಕ್ಟಿದೆ ನಿಮ್ಮದೇ ೯ ಸೀಟ್ ನಂಬರ್. ಪ್ಲೀಸ್ ಅಡ್ಜಸ್ಟ್ ಮಾಡ್ಕೊಳ್ಳಿ. ನನ್ ಸೀಟಲ್ಲಿ ನೀವು ಹೋಗಿ ಕೂತುಕೊಳ್ಳಿ’ ಎಂದ ಒಬ್ಬಾತ.

 ಅವ ಹೇಳಿದಂತೆ ಅವನ ೫೩ನೆ ಸೀಟಲ್ಲಿ ಹೋಗಿ ಕೂತೆ. ಎಲ್ಲಿ ಹೋದರೂ ನನ್ನದೇ ಯಾಕೆ ಟಾರ್ಗೆಟ್ ಆಗುವುದಂತ ಮನ ಮಿಡಿಯಿತು. 

ಸಂಗಮಿತ್ರ ಎಕ್ಸ್ಪ್ರೆಸ್ ರೈಲಿನ ಸೀಟಿನಲ್ಲಿ ಲೇಖಕರು(ಎಡ)        


 ಸಂಗಮಿತ್ರ ಎಕ್ಸ್ಪ್ರೆಸ್ ಬೆಂಗಳೂರನ್ನು ಹಿಂದಿಕ್ಕಿ ಸಾಗುತ್ತಿತ್ತು ಮುಂದೆ ಮುಂದೆ. ಹಿಂದಿನ ದಿನ, ರಾತ್ರಿ ಊರಿಂದ ಇಲ್ಲಿಗೆ ಬಂದ ಬಸ್ಸು ಪ್ರಯಾಣದ ಸುಸ್ತು ಬೇರೆ ಎಳೆಯುತ್ತಿತ್ತು. ಪುಣ್ಯಕ್ಕೆ ಆ ಪಟ್ನಾಕ್ಕೆ ಹೊರಟ ಯುವಕನ ಸೀಟು ಕಿಟಕಿ ಬದಿಗಿತ್ತು. ಹಾಗೆ ಗಾಳಿ ಹಿತವಾಗಿ ಮುಖದಗಲ ಬಡಿಯುತ್ತಿತ್ತು. ಹಾಗೆಯೇ ಇಯರ್ ಫೋನ್‌ನ ಕಿವಿಗಿಟ್ಟುಕೊಂಡೆ. ಮಹಾಕುಂಭದ ದೇವನೆಲೆಗೆ ಹೋಗುವುದಲ್ವೇ... ಚಂದವಾಗಿ ಹಾಡು ಕೇಳುವ ಅಂತ; ಭಂ ಭಂ ಹೂಂಕಾರವಿರುವ ‘ಅಲಖ್ ನಿರಂಜನ್’, ‘ರಾಮ್ ಶಂಕ್ರಕಾ ಭಜನ್ ಕರ್’, ‘ಸತ್ಯಂ ಶಿವಂ ಸುಂದರA’ ಮುಂತಾದ ಗೀತೆಗಳನ್ನು ಸುರುಳಿ ಸುರುಳಿಯಾಗಿ ಆಲಿಸುತ್ತಾ ಲೋಕ ಮರೆತು ತೂಕಡಿಸತೊಡಗಿದೆ.

 ನಿದ್ದೆ ಕಳಚಿ ಸರಿಯಾಗಿ ಎಚ್ಚರಾದಾಗ ರೈಲು ತಮಿಳುನಾಡಿನ ಸಮುದ್ರದ ಅಂಚಿನ ಪ್ರದೇಶದ ಮೇಲೆ ಚಲಿಸುತ್ತಿದೆ! ಅಲ್ಲೆಲ್ಲಾ ಹರಿವೆ ಗಿಡದ ಕಳದಂತೆ ಸಾಲು ಸಾಲು ತೆಂಗಿನ ಮರಗಳು. ಆ ಬಳಿಕ ಉದ್ದಕ್ಕೂ ಕಂಡ ಗದ್ದೆಯ ತಟ್ಟುಗಳು. ಹೊಲದ ಪೂರ್ತಿ ಹಬ್ಬಿದ ಎಂತದೋ ತರಕಾರಿ ಸೊಪ್ಪುಗಳು. ಇವೆಲ್ಲಾ ಹಿಂದಕ್ಕೆ ಬಿಟ್ಟು ರೈಲು ಮುಂದೆ ಮುಂದೆ. ತಮಿಳುನಾಡಿನ ಒಂದೊAದೇ ಸ್ಟೇಶನ್ ಬರುತ್ತಿದ್ದಂತೆ ಈ ಸ್ಲೀಪರ್ ಬೋಗಿಗೆ ಟಿಕೆಟ್ ಇದ್ದೋ ಇಲ್ಲದೆಯೋ ಒಟ್ಟೂ ಜನ ಹತ್ತತೊಡಗಿದರು!

 ಒಮ್ಮಿಂದೊಮ್ಮೆ ನನ್ನೊಳಗಿನ ಕವಿ ಸೆಟೆದು ನಿಂತ. ಮೊಬೈಲಿನಲ್ಲಿ ನೋಟ್‌ಪ್ಯಾಡ್ ತೆರೆದು ಹೀಗೆ ಸಾಲುಗಳ ಟೈಪಿಸಿದೆ:

 ಕಂಡಿದ್ದೆಲ್ಲಾ ಕುಂಭ 

 ಕಂಡಲೆಲ್ಲಾ ಮಡಕೆ

 ಗಂಡು ಹೆಣ್ಣು ಕೊಡ

 ಗಂಡಿನ ಪಾನ ಹೆಣ್ಣಿನ ಮಡಿಲೊಳಗೆ

 ಶಿವನ ನಿರ್ವಾತ ಮಣ್ಣೊಳಗೆ

 ಶಿವೆಯ ಕಾಮನೆ ತೆರೆದ ಕೊಡದ ಬಾಯಿ

 ಸಂಗಮಿಸಿತು ಚೇತನದ ತಹತಹಿಕೆ

 ಕುಂಭದಿAದ ಚೆಲ್ಲಿತಕೋ ಹಾಲ್ನೊರೆ!



    ರೈಲಿನೊಳಗಿಂದ ಕಂಡ ತಮಿಳುನಾಡಿನ ಒಂದು ಸ್ಟೇಶನ್

 ಆಂಧ್ರಪ್ರದೇಶದ ವಿಶಾಖಪಟ್ಟಣ ಕಳೆಯಿತು. ತಕ್ಷಣ ಟಿಕೆಟ್ ಏಜನ್ಸಿಯವ ನೆನಪಾದ. ಮೊಬೈಲ್ ನೋಡಿದರೆ ಪ್ರಯಾಗಕ್ಕೆ ಆತ ಹೇಳಿದಂತೆ ರಿಸರ್ವೇಶನ್ ಖಾತ್ರಿ ಮೆಸೇಜ್ ಬಂದೇ ಇಲ್ಲ. ನಾನು ಮೋಸ ಹೋಗಿರುವುದು ಗ್ಯಾರಂಟಿಯಾಯ್ತು. ತಪ್ತಗೊಂಡ ಮನಸು. ಆದದ್ದು ಆಗಲಿ ಈ ಕಿಟಕಿ ಬದಿಯ ಸೀಟು ಬಿಡಬಾರದೆಂದು ಅಲ್ಲೇ ಝಂಡಾ ಹೂಡಿದೆ. 

 ‘ಅಂಡಾ ಬಿರ್ಯಾನಿ, ಚಿಕನ್ ಬಿರ್ಯಾನಿ, ಸಮೋಸೆ, ಆಲೂ ಪಕೋಡೆ’ ಎಂದೆಲ್ಲಾ ರೈಲಿನ ಕಿಚನ್ ಮಂದಿ ಆಗೀಗ ಕೂಗಿ ಹೇಳುವುದು ಕಾಮನ್ ಆಗಿತ್ತು. ಗುಡ್ಕಾ, ಸಿಗರೇಟ್...ಇತ್ಯಾದಿ ಮಾರಾಟಗಾರರು ಆಗೀಗ ಜೋಕರ್‌ನಂತೆ ಬಂದ ಸ್ಪೀಡಲ್ಲೇ ಮಿಂಚಿ ಮಾಯವಾಗುತ್ತಿದ್ದರು. 

 ರೈಲು ಪ್ರಯಾಣದ ಎರಡನೆ ದಿನ ಮಧ್ಯಪ್ರದೇಶಕ್ಕೆ ಸಂಗಮಿತ್ರ ಎಕ್ಸ್ಪ್ರೆಸ್ ಪ್ರವೇಶಿಸಿಯಾಗಿತ್ತು. ನಮ್ಮ ಕಡೆ ಹೇಗೆ ವೀಳೆದೆಲೆ ಬೀಡ ತಿಂತಾರೋ ಹಾಗೆಯೇ ಇಲ್ಲೆಲ್ಲಾ ತಂಬಾಕು ಪುಡಿಯನ್ನು ಅಂಗೈಲಿ ಹಾಕಿ ಸುಣ್ಣದ ಜೊತೆ ತೀಡಿ ಆ ಮಿಶ್ರಣವನ್ನು ತುಟಿಗಿಟ್ಟು ನಶೆಯನ್ನು ಮೆಲ್ಲುತ್ತಾರೆ. 

 ಹಲ್ವದಂತಿರುವ ಬಿಳಿಬಣ್ಣದ ತಿಂಡಿಯನ್ನು ಮಾರುವಾತ ‘ಪೇಠ’ ಎನ್ನುತ್ತಾ ನಮ್ಮ ಬೋಗಿಗೆ ಬಂದ. ಮೊದಲ ಬಾರಿ ಅಂಥ ತಿಂಡಿ ಕಂಡ ನಾನು, ಪಕ್ಕ ಕುಳಿತವರೊಂದಿಗೆ ಅದರ ಬಗ್ಗೆ ಕೇಳಿದೆ. ಅವರು ‘ಮಧ್ಯಪ್ರದೇಶದ ಕಡೆ ಪೇಠ ಫೇಮಸ್ಸು; ಏನಿಲ್ಲ ಇದು ಕುಂಬಳಕಾಯಿ ಚೂರು ಬೆರೆತ ಸಕ್ಕರೆಯ ಮಿಶ್ರಣ. ಇದಕ್ಕೆ ಬೆಂಗಳೂರಲ್ಲಿ ಕೇಜಿಗೆ ೩೫೦-೪೦೦ರೂಪಾಯಿ ಇದ್ದರೆ ಇಲ್ಲಿ ಕೇವಲ ೮೦-೧೦೦ಕ್ಕೆ ಸಿಗುತ್ತೆ’ ಎಂದರು.

 ಇನ್ನೇನು ಮೂರುವರೆ ಅವಧಿ ಸರಿದರೆ ಪ್ರಯಾಗ ಬರುತ್ತದೆ ಅಂತಾಯ್ತು. ‘ಟಿಕೆಟ್ ದಿಖಾನ... ತುಮಾರ ನಾಮ್?’ ಎನ್ನುತ್ತಾ ರೈಲು ಟಿ.ಸಿ. ಹತ್ತಿರ ಹತ್ತಿರ ಬಂದ. ಕೇವಲ ಸೀಟಲ್ಲಿ ಕುಳಿತವರ ಟಿಕೆಟ್ ಚೆಕಿಂಗ್ ಮಾಡುತ್ತಿದ್ದರು. ಟಿಕೆಟ್ ಇಲ್ಲವರು ಮೆಲ್ಲಗೆ ಕೂತಲ್ಲಿಂದ ಜಾರಿ, ಎದ್ದು ಬೋಗಿಯ ಹಿಂದೆಮುAದೆ ಬರುವ ಪಾಯಿಖಾನೆಗಳ ಬಳಿ ಜಮಾಹೊಂದಿದರು. ನಿದ್ದೆ ತೂಗುತ್ತಿದ್ದರಿಂದ ಎದ್ದು ಆ ಕಡೆ ನನಗೆ ಓಡಲಾಗಲಿಲ್ಲ. ಅದಾಗಲೇ ಟಿ.ಸಿ ಚೆಕಿಂಗ್ ಮಾಡುತ್ತ ಸನಿಹ ಬಂದಾಗಿತ್ತು. ಸ್ವಲ್ಪ ನಿತ್ರಾಣಗೊಂಡ ದನಿಯಲ್ಲಿ ಬೆಂಗಳೂರಿನಲ್ಲಿ ಟಿಕೆಟ್ ಏಜನ್ಸಿಯವ ನನಗೆ ಟೋಪಿ ಹಾಕಿದ್ದನ್ನು ವಿವರಿಸಿದೆ. ಆದರೂ ಕನಿಕರಕ್ಕೆ ಬಗ್ಗದ, ಇಲ್ಲವೇ ದಕ್ಷಿಣ ಭಾರತದ ಕಡೆಯನೋ ಎಂಬ ಕಾರಣಕ್ಕೆ ಟಿ.ಸಿ ೭೦೦ರೂಪಾಯಿ ದಂಡ ವಿಧಿಸಿದ. ಹೀಗೆ ಅಷ್ಟೂ ದುಡ್ಡೂ ನೀಟಾಗಿ ದಂಡಕ್ಕೆ ಕೊಟ್ಟುಬಿಟ್ಟೆ!

 ಪ್ರಯಾಗರಾಜ್ ಹತ್ತಿರ ಬರುತ್ತಿದ್ದಂತೆ ದೇವರ ನಾಮದ ಜಯಘೋಷ ರೈಲಿನ ಪೂರ್ತಿ. ಮಧ್ಯಪ್ರದೇಶದಲ್ಲಿ ದೈವಭಕ್ತಿ ಜಾಸ್ತಿ ಇರಬೇಕು ಅನಿಸುವಷ್ಟು ಅಲ್ಲಿಂದ ಕುಂಭಕ್ಕೆ ಹೋಗುವ ಸಾಕಷ್ಟು ಪ್ರಯಾಣಿಕರು ನಾನಿದ್ದ ಬೋಗಿ ತುಂಬಿದ್ದುದು ಗಮನಕ್ಕೆ ಬಂತು. ರೈಲಿನಿಂದ ಹೊರಗೆಬಂದು ಪ್ರಯಾಗರಾಜ್ ಸ್ಟೇಶನ್‌ಗೆ ಕಾಲಿಡುತ್ತಿದ್ದಂತೆ ಉತ್ತರ ಪ್ರದೇಶದ ಕೊರೆಯುವ ಚಳಿ ಜರ್ಕಿನ್ ತೊಟ್ಟಿದ್ದರೂ ಸಹ ಮೈಹೊಕ್ಕಿತು! 

ಮಹಾಕುಂಭದ ನೆಲದಗಲ: ಅವನು ರೈಲಿನಲ್ಲಿ ನಾನಿದ್ದ ಬೋಗಿಯ ನಾನು ಕುಳಿತ ಬರ್ಥ್ನ ಆಚೆಗೆ ನಡೆಹಾದಿ ಪಕ್ಕದ ಅಪ್ಪರ್‌ಬರ್ಥ್ ಸೀಟಿನಲ್ಲಿ ಕೂತಿದ್ದ. ಆ ತರುಣನ ಪ್ರಾಯ ಆಮೇಲೆ ಕೇಳಿದಾಗ ೨೮ ಎಂದೂ, ಹೆಸರು ಜಿತೇಂದರ್ ಅಂತನೂ, ಊರು ಹರಿಯಾಣ ರಾಜ್ಯದ ಯಾವುದೋ ಸ್ಥಳ ಎಂದಾಗಿಯೂ ಗೊತ್ತಾಯಿತು.

 ಆತ ಕುಳಿತ ಸೀಟಿನಲ್ಲಿ ರೈಲಿನ ಡಬ್ಬಿ ಗೋಡೆ ಕಡೆ ಮುಖ ತಿರುಗಿಸಿ ಬೆಳ್ಳಗಿನ ಶಾಲು ಹೊದ್ದುಕೊಂಡು ಚಕ್ಕಳಮಕ್ಕಳ ಹಾಕಿಕೊಂಡು ಧ್ಯಾನವೋ ಜಪವೋ ಮಾಡುತ್ತಿದ್ದ; ಈ ರೀತಿ ಜಿತೇಂದರ ಪ್ರಯಾಗದ ಪ್ರಯಾಣದ ಎರಡೂ ದಿನಗಳಲ್ಲಿ ದಿನಕ್ಕೆ ಎರಡು ಬಾರಿ ಮಾಡುತ್ತಿದ್ದುದು ನನ್ನ ನೋಟವ ಸೆಳೆಯಿತು.

 ಫೆ.೭ ರಂದು ಪ್ರಯಾಗರಾಜ್ ಜಂಕ್ಷನ್ ಸ್ಟೇಶನ್‌ನಲ್ಲಿ ಸಂಗಮಿತ್ರ ಎಕ್ಸ್ಪ್ರೆಸ್‌ನಿಂದ ಇಳಿದುಕೊಂಡಾಗ ನಾನೂ ಜಿತೇಂದರನೂ ಪರಸ್ಪರ ಮಾತನಾಡಿಕೊಂಡೆವು. ಪರಿಚಿತಗೊಂಡೆವು. ಸಂವಹನಕ್ಕೆ ಇಂಗ್ಲಿಷ್, ಕ್ಲಿಷ್ಟವಾದಾಗ ಹಿಂದಿ ಬಳಸಿಕೊಳ್ಳುತ್ತಿದ್ದೆವು. ಸಮಯ ಅದಾಗಲೇ ನಡುರಾತ್ರಿ ೧೨ರ ಹತ್ತಿರ. ಸ್ಟೇಶನ್ ಪೂರ ಎಲ್ಲಿ ನೋಡಿದರೂ ವಿರಾಟ್ ಸ್ವರೂಪದ ಜನ ಸಂದಣಿ; ನಡೆಯುವಾಗ ಒಬ್ಬರ ಕಾಲು ಇನ್ನೊಬ್ಬರಿಗೆ ತಗುಲುವಷ್ಟು. 

 ನಡೆಯುತ್ತಾ ನಡೆಯುತ್ತಾ ಗಡಸು ದಾಡಿಯ ಪೊದೆ ಮೀಸೆಯ ಜಿತೇಂದರ್ ಹೇಳಿದ ‘ನಾನು ಸದ್ಗುರುಗಳ ಕೊಯಂಬತ್ತೂರಿನ ಈಶ ಆಶ್ರಮದಲ್ಲಿ ಎಂಟು ತಿಂಗಳ ಯೋಗ ಕೋರ್ಸ್ಗೆ ಸೇರಿಕೊಂಡು ಈಗಾಗಲೇ ಆರು ತಿಂಗಳು ಕಳೆದಿವೆ. ನನಗೆ ಅನೇಕ ಪುಣ್ಯಕ್ಷೇತ್ರಗಳಿಗೆ ಹೋಗಿ ಇದ್ದುಕೊಂಡು ಗೊತ್ತುಂಟು. ಇಲ್ಲೇ ಹತ್ತಿರ ಲೋಕಲ್‌ನಲ್ಲಿ ಮನೆಗಿನೆ ವಿಚಾರಿಸಿದರೆ ಯಾರಾದರೂ ಉಳಿಸಿಕೊಂಡಾರು. ನೀವೂ ನನ್ನ ಜೊತೆಗಿರಿ. ಇಬ್ಬರೂ ತಂಗುವ ಮನೆಯ ರೂಮು ಛಾರ್ಜ್ನ ಹಂಚಿಕೊAಡರೆ, ಲಾಡ್ಜ್ಗೆ ಕೊಡುವ ಎಷ್ಟೋ ದುಡ್ಡು ಉಳಿಯುತ್ತೆ’ ಎಂದ. ಹೌದಲ್ವ! ಅನಿಸಿತು.

 ಆತನ ಆಹ್ವಾನ ಸ್ವೀಕರಿಸಿದೆ. ಯಾಕೆಂದರೆ ನನಗೂ ಈ ಜನಜಂಗುಳಿಯಲ್ಲಿ ಹೇಗೆ ಉರುಡಿಕೊಂಡು ಅದೂ ನಡುರಾತ್ರಿಯಲ್ಲಿ ರೂಂ ಹುಡುಕುತ್ತಾ ಸಾಗುವುದೆಂಬ ಆತಂಕ ಬೇರೆ. ಆದಾಗಲೇ ಮೊಬೈಲ್ ಆಪ್ ಬಿಡಿಸಿ ನೋಡಿದರೆ ತ್ರಿ ಸ್ಟಾರ್ ಲಾಡ್ಜ್ ಸೇರಿ ಎಲ್ಲವೂ ದಿನಕ್ಕೆ ಆರು ಸಾವಿರಕ್ಕೂ ಮಿಕ್ಕಿ ದರ ಹೊಂದಿದ್ದವು. ಅಲ್ಲದೇ ಟ್ರೇನ್ ಸ್ಟೇಶನ್ ಪಕ್ಕ ಕಂಡುಬAದ ಲಾಡ್ಜ್ಗಳು ‘ರೂಮು ಖಾಲಿಯಿಲ್ಲ’ ಬೋರ್ಡ್ ತಗುಲಿಸಿಕೊಂಡಿದ್ದವು. 

 ತಡರಾತ್ರಿಯಲ್ಲೂ ಹಗಲಿನಂತೆ ಸಾಲು ಸಾಲು ಚಾ ತಿಂಡಿ ಅಂಗಡಿಗಳು ತೆರೆದುಕೊಂಡಿದ್ದವು. ಚಳಿಗೆ ಬಿಸಿಬಿಸಿ ಚಹಾ ಕುಡಿಯುವಾಗ ಜಿತೇಂದರನು ಅಂಗಡಿಯವರ ಜೊತೆ ‘ಅಕ್ಕಪಕ್ಕದಲ್ಲಿ ಉಳಿದುಕೊಳ್ಳಲು ಮನೆ ಇದೆಯಾ’ ಅಂತ ವಿಚಾರಿಸಿದ. ಉತ್ತರಪ್ರದೇಶದ ಮಂದಿ ಚಾ ಮಾಡುವಾಗ ಅದಕ್ಕೆ ಶುಂಠಿ ತರಿದುಹಾಕುವುದು ಇದ್ದೇ ಇತ್ತು. ಚಹಾ ಅಂಗಡಿಯವ ಯಾರಿಗೋ ಕರೆ ಮಾಡಿದ. ಸ್ವಲ್ಪ ಹೊತ್ತು ಸರಿದು ಒಬ್ಬರು ನಡುಪ್ರಾಯದವರು ಬಂದು ಉಳಿದುಕೊಳ್ಳಲು ತನ್ನ ಮನೆಯ ಕೋಣೆ ಬಿಟ್ಟುಕೊಡುವುದಾಗಿ ಹೇಳಿದರು. ದಿನಕ್ಕೆ ೧೦೦೦ ಬಾಡಿಗೆಯಾಗುತ್ತೆ ಎಂದೂ ತಿಳಿಸಿದರು. ನಾವು ಒಪ್ಪಿಕೊಂಡೆವು; ರೇಲ್ವೆ ಸ್ಟೇಶನ್ ಹತ್ತಿರದಲ್ಲೇ ಮನೆ ಸಿಕ್ಕಿರುವುದು ನನಗೆ ಹಾಗೂ ಸಹಯಾತ್ರಿ ಜಿತೇಂದರನಿಗೆ ಕುಶಿ ಉಂಟುಮಾಡಿತು. 

 ಪ್ರಯಾಗದ ರೇಲ್ವೆ ಸ್ಟೇಶನ್ ಬಳಿಯಿಂದ ಮಹಾಕುಂಭ ನಡೆಯುವ ಜಾಗಕ್ಕೆ ಆರೇಳು ಕಿ.ಮೀ ದೂರವಿದೆ. ಮರುದಿನ ಬೆಳಗ್ಗೆ ಈ ಮನೆಯ ಕೊಣೆಯನ್ನು ಖಾಲಿ ಮಾಡೋಣವೆಂದು ಜಿತೇಂದರ ಹೇಳಿದ. ಕುಂಭ ಜರುಗುವÀ ಸ್ಥಳದ ಬಳಿಯೆಲ್ಲಾದರು ಯಾರದಾದರೂ ಮನೆಯಲ್ಲಿ ಉಳಿಯುವ. ನಾಳೆ ದಿನ ಪೂರ್ತಿ ತಂಗಲು ಮನೆಯನ್ನು ಹುಡುಕುವುದಕ್ಕೆ ಪ್ರಾಶಸ್ತö್ಯ ಕೊಡೋಣವೆಂದು ತೀರ್ಮಾನಿಸಿದೆವು.

 ಅದು ಹೇಗೋ ರೈಲಿನಲ್ಲಿ ಕಂಡ ಅನಾಮಿಕ. ಆಮೇಲೆ ಪರಸ್ಪರ ಪರಿಚಯಗೊಂಡ ಈ ಜಿತೇಂದರನನ್ನು ನಂಬಿದ್ದೆ. ಈ ಹುಡುಗನಲ್ಲಿ ವಿಶ್ವಾಸವಿರಿಸಬಹುದೆಂದು ಅದು ಹೇಗೆ ಮನಸಿಗೆ ತೋಚಿತೋ ಗೊತ್ತಿಲ್ಲ?! ಹಾಗೆ ನೋಡುವುದಾದರೆ ನಿರ್ದಿಷ್ಟ ಸ್ಥಳದ ಹಿನ್ನೆಲೆ ಇರದೆ ಕೇವಲ ಸಹಪ್ರಯಾಣ ಮಾತ್ರದಿಂದ ನಂಬುವುದರಿAದ ಮೋಸ ಹೋಗುವುದೇ ಹೆಚ್ಚು. ಆದರೆ ಇವೆಲ್ಲಕ್ಕೂ ಮೀರಿ ನಾನು ಜಿತೇಂದರನ ನಂಬಿದ್ದೆ. 


  ಯಾತ್ರಿಕರಿಂದ ಕಿಕ್ಕಿರಿದ ಪ್ರಯಾಗರಾಜ್ ರೈಲ್ವೇ ಸ್ಟೇಶನ್

 ಬೆಳಗಾಯಿತು. ಪ್ರಯಾಗದಲ್ಲಿ ಹಗಲು ಕಣ್ಣು ತೆರೆಯಿತು. ಆಗಲೇ ಜಿತೇಂದರನು ಎದ್ದು ನಾವು ಉಳಿದುಕೊಂಡಿದ್ದ ಮನೆಯ ತಾರಸಿಯೇರಿ ಆಸನಗಳನ್ನು ಹಾಕುತ್ತ ಬಿಡಿಸುತ್ತ ಯೋಗ ಭಂಗಿಯಲ್ಲಿದ್ದ. ನಾನು ಇಲ್ಲೇ ಹತ್ತಿರ ಸ್ವಲ್ಪ ಆಚೆಈಚೆ ಸುತ್ತಿ ಬರೋಣವೆಂದು ಹೊರಟೆ. ಸಾಮಾನ್ಯವಾಗಿ ಹೊಸ ಪ್ರದೇಶದಲ್ಲಿ ತಂಗಿದ್ದರೆ ಬೆಳಬೆಳಗ್ಗೆ ಅಕ್ಕಪಕ್ಕ ಒಂದರ್ಧ ಕಿ.ಮೀ ಅಲ್ಲಿನ ಪರಿಸರ ಹೇಗಿದೆಯೆಂದು ವೀಕ್ಷಿಸುವ ಗುಣ ನನ್ನಲ್ಲಿದೆ. ಅದರಂತೆ ಇಲ್ಲಿ ತಿರುಗಿದಾಗ ಕಂಡಿದ್ದು; ಹೆಚ್ಚಿನವು ಇಟ್ಟಿಗೆ ಬಳಸಿ ನಿರ್ಮಿಸಿದ ಸುಣ್ಣವಷ್ಟೇ ಬಳಿದುಕೊಂಡ ಮನೆಗಳು. ಅವು ಬೆಂಕಿಪೆಟ್ಟಿಗೆಯ ಆಕಾದಲ್ಲಿದ್ದುವು. ಮನೆಗಳ ಎದುರಿಗೇ ಹಾದುಹೋಗುವ ಕಾಲು ದಾರಿ. ಪ್ರಯಾಗದಲ್ಲಿನ ರಸ್ತೆ ಬದಿಯ ಚರಂಡಿ ವ್ಯವಸ್ಥೆ ಮಾತ್ರ ತೀರ ಹದಗೆಟ್ಟಿತ್ತು. 

 ಯಾವುದೇ ಅಂಗಡಿಮುAಗಟ್ಟುಗಳ ನಾಮಫಲಕ ಓದಿದರೆ ಬಹುಪಾಲು ರಾಮ, ಕೃಷ್ಣ, ಶಿವಪಾರ್ವತಿ, ಹನುಮಂತ ಇತ್ಯಾದಿ ದೇವರ ಹೆಸರುಗಳೇ. ಹೇಗೆ ಇಲ್ಲಿ ಕೇವಲ ಹಿಂದಿಯಲ್ಲೇ ಸಂವಹನ ನಡೆಯುತ್ತದೋ ಅಂತೆಯೇ ಎಲ್ಲಾ ಕಡೆಗಳಲ್ಲೂ ಹಿಂದಿ ಅಕ್ಷರಗಳ ಬೋರ್ಡ್ ಬಿಟ್ಟರೆ ಇಂಗ್ಲಿಷ್ ಕಾಣಸಿಗುವುದು ವಿರಳ. 

 ನಾವು ಉಳಿದುಕೊಂಡಿದ್ದ ಪ್ರಯಾಗ ರೇಲ್ವೇ ಸ್ಟೇಶನ್ ಹತ್ತಿರದ ಮನೆಯಿಂದ ಕುಂಭಮೇಳ ಜರುಗುವಲ್ಲಿಗೆ ತಲುಪಲು ಬಾಡಿಗೆ ಆಟೋ, ಬೈಕುಗಳಿದ್ದವು. ಅವುಗಳ ಬಾಡಿಗೆ ರೇಟು ಅಗತ್ಯಕ್ಕಿಂತ ಹೆಚ್ಚಾಗಿತ್ತು. ವಾಹನದೊಳಕ್ಕೆ ಅಗತ್ಯಕ್ಕಿಂತ ಹೆಚ್ಚೇ ಯಾತ್ರಿಕರನ್ನು ತುಂಬುತ್ತಿದ್ದರು ಅನ್ನುವುದಕ್ಕಿಂತ ದಬ್ಬುತ್ತಿದ್ದರು. ನಾವು ಆಟೋ ಮೂಲಕ ಕುಂಭಮೇಳಕ್ಕೆ ಹೋದೆವು. ಇಳಿದುಕೊಂಡ ಜಾಗದಿಂದ ಮೇಳ ನಡೆಯುವಲ್ಲಿಗೆ ಸುಮಾರು ಮೂರು ಕಿ.ಮೀ ಕಾಲು ನಡಿಗೆಯಲ್ಲೇ ಕ್ರಮಿಸಬೇಕಿತ್ತು. ವಿಐಪಿಗಳದ್ದಲ್ಲದೇ ಮತ್ಯಾವ ವಾಹನವನ್ನೂ ಕಾಲ್ತುಳಿತÀ ದುರ್ಘಟನೆಯ ನಂತರ ಒಳಕ್ಕೆ ಬಿಡುತ್ತಿರಲಿಲ್ಲ.

                    
  ಉಳಿದುಕೊಂಡ ಮನೆಯಿಂದ ಕಂಡ ಬಾಹ್ಯ ದೃಶ್ಯ         

 ಮೇಳಕ್ಕೆ ಸಾಗುವ ರಸ್ತೆಯಲ್ಲಿ ಎಲ್ಲಿ ನೋಡಿದರೂ ರಸ್ತೆಯೇ ಕಾಣದಷ್ಟು ಜನವೋ ಜನ. ಜೊತೆಗಿದ್ದ ಜಿತೇಂದರ ‘ಇವತ್ತು ಸಂಜೆಗೊಳಗಾಗಿ ಉಳಿದುಕೊಳ್ಳಲು ಇಲ್ಲೇ ಹತ್ತಿರದವರ ಮನೆ ಹುಡುಕುವ’ ಎಂದ. ನನ್ನ ಒಪ್ಪಿಗೆ ಸೂಚಿಸಿದೆ.

 ಕನ್ನಡದಲ್ಲಿ ನದಿ ಸಂಗಮಿಸುವ ಸ್ಥಳಕ್ಕೆ ‘ಕೂಡಲು’ ಎಂದು ಕರೆಯುತ್ತಾರೆ. ಉದಾಹರಣೆಗೆ ಕೂಡಲಸಂಗಮ, ತಿರುಮಕೂಡಲು. ಅದೇ ಉತ್ತರದ ಕಡೆ ‘ಪ್ರಯಾಗ’ ಎನ್ನುತ್ತಾರೆ. ಈ ಗಂಗಾ-ಯಮುನಾ-ಸರಸ್ವತಿಯ ಸಂಗಮವು ಇಡೀ ದೇಶದಲ್ಲೇ ಬೃಹತ್ ಆಗಿರುವುದರಿಂದ ಪ್ರಯಾಗ’ರಾಜ’ ಎಂದು ಕರೆಯಲಾಗಿದೆ. ಕುಂಭ ಮೇಳವು ಹತ್ತಿರ ಹತ್ತಿರ ಬರುತ್ತಿದ್ದಂತೆ ನದಿಯ ಹರಿವಿನ ಸಪ್ಪಳ ಅಷ್ಟೂ ಗದ್ದಲದ ನಡೆಯೂ ಕೇಳಿ ಬರುತ್ತಿತ್ತು. 

 ಕುಂಭ ನಡೆಯುವ ಸ್ಥಳ ಕಾಣುತ್ತಿದ್ದಂತೆ ನಡೆದ ಅಷ್ಟೂ ಆಯಾಸ ನೀಗಿದಷ್ಟು ಸಂತಸಗೊAಡೆ. ಎಣಿಕೆಗೆ ಸಿಗದಂತೆ ಮಠ ಮಂದಿರ ಹಾಗೂ ಸಾಧುಗಳ ಅಖಾಡದ ಡೇರೆಗಳು ಸಂಗಮದ ದಾರಿಯುದ್ದಕ್ಕೂ ಇದ್ದವು. ನಮಗೆ ಈ ವಿಶಾಲವಾದ ಮೇಳದಲ್ಲಿ ಪವಿತ್ರ ಸ್ನಾನ ಮಾಡುವ ಸ್ಥಳ ಎಲ್ಲಿ ಹುಡುಕುವುದೆಂಬ ಗೊಂದಲ. ಜಿತೇಂದರನ ಜೊತೆ ‘ನಾಳೆ ಪುಣ್ಯಸ್ನಾನ ಮಾಡುವ’ ಎಂದು ನಿರ್ಧಾರ ತಿಳಿಸಿದೆ. 

 ತಿಂಡಿಯೂಟವನ್ನು ದಾರಿಯುದ್ದಕ್ಕೂ ಮಠಮಂದಿರಗಳಿಗೆ ಸಂಬAಧಿಸಿದ ಡೇರೆಗಳಲ್ಲಿ ಮೂರು ಹೊತ್ತೂ ಉಚಿತವಾಗಿ ವಿತರಿಸಲಾಗುತ್ತಿತ್ತು. ಹಾಗಾಗಿ ಹೊಟ್ಟೆ ಹಸಿವನ್ನು ಧರ್ಮಕ್ಕೆ ನೀಗಿಸಿಕೊಳ್ಳತೊಡಗಿದೆವು. ರೋಟಿ, ದಾಲ್, ಕಿಚಡಿ, ಅನ್ನ, ಖಡಿ (ಸಾರು) ಇವೇ ಪದಾರ್ಥಗಳನ್ನು ಯಾತ್ರಿಕರಿಗೆ ಸಮಾರಾಧನೆ ಮಾಡುತ್ತಿದ್ದರು. ಮೇಳ ನಡೆಯುವ ಅಲ್ಲಲ್ಲಿ ಸಾವಿರಕ್ಕೂ ಮಿಕ್ಕಿ ಕೃತಕ ಶೌಚಾಲಯಗಳನ್ನೂ ನೀರಿಗೆ ನಲ್ಲಿ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಭಾರತದಾದ್ಯಂತ ಪಬ್ಲಿಕ್ ಟಾಯ್ಲೆಟ್ ಅವಸ್ಥೆ ಹೇಗಿರುತ್ತದೆಂದು ಬೇರೆ ಹೇಳಬೇಕಿಲ್ಲ. ಆದರೂ ಲಕ್ಷಾಂತರ ಯಾತ್ರಿಗಳಿಗೆ ಮೂಲಸವಲತ್ತು ಒದಗಿಸುವುದು ಸವಾಲು ಹೌದು.

 ಸಮುದ್ರ ಮಂಥನ ದ್ವಾರದಿಂದ ಸಂಗಮಕ್ಕೆ ದಾರಿ

 ಮೇಳಕ್ಕೆ ಯಮುನಾ ಮತ್ತು ಗಂಗಾ ನದಿಯ ತಟದ ಬದಿಯಿಂದ ಮುಂದುವರಿಯುವAತೆ ರಸ್ತೆಗಳಿದ್ದವು. ಗಂಗೆ ಶಿವ ಪರ, ಯಮುನೆ ವೈಷ್ಣವ ಪರ ಎಂಬ ನಂಬಿಕೆ. ನಾವು ಗಂಗಾ ನದಿಯ ದಂಡೆ ಮೇಲಿಂದ ನಡೆಯಹತ್ತಿದ್ದು. ಗಂಗಾ ನದಿಯ ಉದ್ದಗಲ ಕಣ್ಣೆಟುಕದಷ್ಟು! ನದಿಯ ಮರಳಿನ ಹರವಿನಲ್ಲಿ ಮೇಳ ಮೈಯೆತ್ತಿತ್ತು. ಸುಮಾರು ಮೂವತ್ತೆರಡು ಸೆಕ್ಟರ್‌ಗಳಾಗಿ ಉತ್ಸವದ ಜಾಗವನ್ನು ವಿಭಜಿಸಿದ್ದು ಯಾತ್ರಿಕರಿಗೆ ಸಂಗಮ ಸ್ಥಳ ತಲುಪಲು ಸುಲಭವಾಗಲೆಂದು. ಸಮುದ್ರ ಮಂಥನ, ವೃಷಭ ಮೊದಲಾದ ಪುರಾಣದ ನಾಮಾವಳಿಯ ಹತ್ತಕ್ಕೂ ಹೆಚ್ಚು ದ್ವಾರಗಳಿದ್ದವು. ಆ ದ್ವಾರಗಳ ಬಳಿ ತಲುಪಲಿಕ್ಕೆ ಗಂಗಾ ನದಿಗೆ ಅಡ್ಡಲಾಗಿ ಹಾಕಿದ ಹತ್ತಾರು ಕಬ್ಬಿಣದ ಸಿಲಿಂಡರಿನ ಮೇಲೆ ತಾತ್ಕಾಲಿಕವಾಗಿ ನಿಲ್ಲಿಸಿದ ಕಬ್ಬಿಣದ ಹಾಳೆಯ ಸೇತುವೆಗಳು. ಊರ್ಧ್ವ ನೋಟವನ್ನು ಎಲ್ಲಿ ಹಾಯಿಸಿದರೂ ಕೇಸರಿ ಧ್ವಜಗಳು. 


  ಮೇಳದಲ್ಲಿ ನಡಕೊಂಡು ಹೋಗುತ್ತಿರುವ ಯಾತ್ರೀ ಗಣ

 ಆಗಾಗ ಮೈಕಿನಲ್ಲಿ ಸಂಗ ಕಳೆದುಕೊಂಡ ಮಕ್ಕಳು ಮುದುಕರು ಮಹಿಳೆಯರ ಹೆಸರುಗಳನ್ನು ಬಿತ್ತರಿಸಲಾಗುತ್ತಿತ್ತು. ಪೋಲಿಸರು ಹಾಗೂ ಅರೆಮಿಲಿಟರಿ ಪಡೆ ಅಲ್ಲಲ್ಲಿ ಕಾಣಬರುತ್ತಿದ್ದರು. ಭದ್ರತಾ ಸಿಬ್ಬಂದಿ ಹತ್ತಿರ ಸಂಗ ಕಳೆದುಕೊಂಡವರು ದೂರು ನೀಡುತ್ತಿದ್ದರು. 

 ಗಂಗಾ ತಟದ ಬದಿಗೆ ಸುಮಾರು ಐವತ್ತು ಮೀಟರ್ ಎತ್ತರದ ಗುಡ್ಡ ಪ್ರದೇಶ ತೆರೆಯಿತು. ಜಿತೇಂದರನೂ ಸೇರಿ ‘ನಾವು ಆ ಬೆಟ್ಟ ಹತ್ತಿದರೆ ಅಲ್ಲೆಲ್ಲಾದರೂ ತಂಗಲು ಮನೆ ಸಿಗಬಹುದು’ ಎಂದು ಅಂದಾಜಿಸಿದೆವು. ಆ ಬೆಟ್ಟಕ್ಕೇರಲು ಮೆಟ್ಟಲುಗಳೂ ಇದ್ದವು. ಹತ್ತಿ ನೋಡಿದಾಗ ಅಲ್ಲೊಂದು ಹನುಮ ಮಂದಿರ. ಮಂದಿರದ ಒಳಹೊಕ್ಕು ಅರೆಗಂಟೆ ಕಣ್ಮುಚ್ಚಿ ಧ್ಯಾನಿಸಿದೆ. ಅಲ್ಲಿಂದ ಜಿತೇಂದರನ ಜೊತೆ ಬೆಟ್ಟದ ಇನ್ನೊಂದು ಮಗ್ಗುಲಿಗೆ ಇಳಿಯತೊಡಗಿದಾಗ ಹಳ್ಳೀ ಘಮಲಿನ ಡಾಮರು ರಸ್ತೆ ಕಣ್ಣಿಗೆ ಬಿತ್ತು.

 ಆ ರಸ್ತೇಗುಂಟ ನಡೆಯುತ್ತ ಇಳಿದಾಗ ಒಂದು ಬದಿಗೆ ಪಾನ್‌ಪರಾಗದ ಗೂಡಂಗಡಿ ಎದುರಾಯಿತು. ಆ ಅಂಗಡಿಯನ್ನು ಹೈಸ್ಕೂಲ್ ವಯಸ್ಸಿನ ಬಾಲಕನೊಬ್ಬ ನೋಡಿಕೊಳ್ಳುತ್ತಿದ್ದ. ಅವನ ಬಳಿ ‘ಇಲ್ಲಿ ಉಳಿದುಕೊಳ್ಳೋಕೆ ಮನೆ ಏನಾದರೂ ಸಿಗುತ್ತಾ?’ ಎಂದು ಕೇಳಿದೆವು. ಅಮ್ಮನಿಗೆ ಕರೆ ಮಾಡಿ ಕೇಳುತ್ತೇನೆಂದ ಬಾಲಕ ಫೋನ್ ಮಾಡಿದ. ಆತನ ಅಮ್ಮ ಅವರ ಮನೆಯ ಒಂದು ಕೋಣೆಯನ್ನು ದಿನಕ್ಕೆ ೧೦೦೦ ಛಾರ್ಜಿನಂತೆ ಬಿಡಲು ಒಪ್ಪಿದರು. ಛಾರ್ಜನ್ನು ಜಿತೇಂದರನ ಜೊತೆ ಹಂಚಿಕೊAಡು ಮೂರು ದಿನ ಉಳಕೊಳ್ಳುತ್ತೇವೆ ಎಂದೂ ಫೆ.೧೦ರಂದು ರಾತ್ರಿ ಮನೆ ಬಿಡುತ್ತೇವೆಂದೂ ಆ ಮನೆಯೊಡತಿಗೆ ಹೇಳಿದೆವು.

 ಆಗಲೇ ರಾತ್ರಿ ಗಂಟೆ ಒಂಭತ್ತರ ಹತ್ತಿರ. ಮೇಳದ ಕಡೆಗೆ ಹೋಗಿ ಹೊಟ್ಟೆಗೇನಾದರೂ ಧರ್ಮಕ್ಕೆ ಊಟ ಪ್ರಸಾದ ಹಾಕಿಕೊಂಡು ಬರೋಣವೆಂದು ಅತ್ತಕಡೆೆ ಕಾಲು ನೂಕಿದೆವು. ಕುಂಭಮೇಳ ನಡೆಯುವ ನಿಶ್ಚಿತ ಸ್ಥಳಕ್ಕೆ ಸುಮಾರು ಐದಾರು ಕಿ.ಮೀ ನಡಕೊಂಡು ಬಂದ ಸುಸ್ತು ದೇಹಪೂರ ಎಳೆಯುತ್ತಿತ್ತು. ಪಂಜಾಬ್ ರಾಜ್ಯದ ಯಾರೋ ಸ್ವಾಮೀಜಿಯವರ ಡೇರೆಯಲ್ಲಿ ಊಟ ಕೊಡುತ್ತಿರುವುದು ಕಾಣಿಸಿತು. ನುಗ್ಗಿದೆವು. ರೋಟಿ, ದಾಲ್, ಚಾವಲ್, ಸಬ್ಜಿ ಊಟದ ಮಾಮೂಲಿ ಮೆನು; ಸ್ಟೀಲ್ ತಟ್ಟೆಯಲ್ಲೇ ಆಹಾರ ನೀಡಿದ್ದರು. ಬಳಸಲು ಚಮಚವನ್ನೂ ಇತ್ತಿದ್ದರು. 


  ಸ್ವಾಮೀಜಿಗಳ ಡೇರೆಯ ಮುಂಭಾಗ ಊಟೋಪಚಾರ
                                           

 ನಾವು ತಂಗಿದ್ದ ಸ್ಥಳಕ್ಕೆ ಗುಡ್ಡವೇರಿ ಹೋಗುತ್ತಾ ಎತ್ತರದಿಂದ ಮೇಳವನ್ನೊಮ್ಮೆ ನೋಡುತ್ತೇವೆ; ಆಕಾಶದಿಂದ ಸಹಸ್ರಾರು ನಕ್ಷತ್ರಗಳು ಧರೆಗೆ ಬಿದ್ದವೋ ಎಂಬAತೆ ಲೆಕ್ಕವಿರದಷ್ಟು ವಿದ್ಯುತ್ ದೀಪಗಳಿಂದ ಅಲಂಕೃತಗೊAಡ ಮಹಾಕುಂಭದ ವಿಶಾಲತೆ ದಂಗುಬಡಿಸಿತು! ರಾತ್ರಿಯಾದರೂ ನಿಲ್ಲದ ಯಾತ್ರಿಕರ ಆಗಮನ ನಿರ್ಗಮನ ನಡೆಯುತ್ತಲೇ ಇತ್ತು. 

 ಉಳಕೊಂಡಿದ್ದ ಮನೆಯ ಒಡತಿ ಮಲಗಲು ವ್ಯವಸ್ಥೆ ಮಾಡಿದ್ದರು. ಆದರೆ ಅಲ್ಲಿನ ಬಾತ್‌ರೂಮು ನೋಡಿದಾಗ ವಿಸ್ಮಿತನಾದೆ. ಅದಕ್ಕೆ ಬಾಗಿಲುಗಳೇ ಇರಲಿಲ್ಲ. ಬದಲಿಗೆ ಶೌಚಾಲಯಕ್ಕೆ ಕೆಂಪನೆಯ ಬಟ್ಟೆಯ ಪರದೆ ಸಿಕ್ಕಿಸಿದ್ದರು! ನಾವು ವಿಸರ್ಜನೆಗೆ ಕೂತಾಗ ಒಮ್ಮೆಲೆ ಯಾರಾದರೂ ಪರದೆ ಸರಿಸಿ ಒಳಬಂದರೆ ಗತಿಯೇನು? ಅದಕ್ಕೆ ತಲೆಗೆ ಹೊಳೆದಿದ್ದು; ಜೋರಾಗಿ ಮೊಬೈಲಿನಲ್ಲಿ ಸಂಗೀತ ಪ್ಲೇ ಮಾಡಿಕೊಂಡು ಕೂತುಕೊಳ್ಳುವುದು. 

 ಮಾರನೆಯ ದಿನ ಸಹಯಾತ್ರಿ ಜಿತೇಂದರನ ಜೊತೆ ಸೇರಿ ಮೊದಲಿಗೆ ಸಂಗಮ ಸ್ಥಳವನ್ನು ಹುಡುಕಿದ ನಂತರ ಪುಣ್ಯಸ್ನಾನ ಮಾಡುವುದೆಂದು ತಯಾರಾದೆವು. ಪ್ರಯಾಗದಲ್ಲಿ ಉಳಿದ ಅಷ್ಟೂ ದಿನ ಬೆಳಗಿನ ಉಪಹಾರವನ್ನು ತಂಗಿದ್ದ ಮನೆಯಲ್ಲೇ ತಿನ್ನಲು ತೀರ್ಮಾನಿಸಿದ್ದೆವು, ಹೊರಗೆ ಮೇಳದಲ್ಲಿ ಧರ್ಮಕ್ಕೆ ಸಿಕ್ಕಿತೆಂದು ಮೂರು ಹೊತ್ತು ತಿಂಡಿಯೂಟ ಚಪ್ಪರಿಸಿದರೆ ಹೊಟ್ಟೆ ಹಾಳಾದೀತೆಂಬ ಕಾಳಜಿ ನಮ್ಮದು. ಹೊಸ ಚೈತನ್ಯದೊಂದಿಗೆ ಸಂಗಮ ಸ್ಥಳಕ್ಕೆ ಹೊರಟೆವು. ಅಷ್ಟೊಂದು ವಿಶಾಲ ಮೇಳದಲ್ಲಿ ನದಿಗಳ ಕೂಡುವಿಕೆ ಅನ್ವೇಷಿಸುವುದು ಸುಲಭ ಸಾಧ್ಯವಾಗಿರಲಿಲ್ಲ.

 ದಾರಿಯುದ್ದಕ್ಕೂ ರುದ್ರಾಕ್ಷಿ, ತುಳಸಿ, ಕಮಲ, ಕರುಂಗಾಲಿ, ಸ್ಫಟಿಕ ಸರಗಳನ್ನೂ, ಕಾಳಿ ಮಾತೆಯ ಕೈಯಲ್ಲಿರುವ ‘ಕಪಾಡ್’ ಎಂಬ ಮರದ ತಟ್ಟೆಯನ್ನೂ ಮಾರುತ್ತಿದ್ದರು. ಶಂಖ, ಢಮರು, ದೇವರ ಮೂರ್ತಿ ಮಾರುವುದು ಎಲ್ಲೆಂದರಲ್ಲಿ ಕಂಡುಬAತು. 

ಸಂಗಮದ ಪುಣ್ಯಜಳಕ: ಸುಮಾರು ಮೂರು ಕಿ.ಮೀ ನಡೆದಿರಬಹುದು. ದೂರದಿಂದಲೇ ಸಹಸ್ರ ಮಂದಿ ಉದ್ದಕ್ಕೂ ಸಂದಣಿ ಹೊಂದಿರುವುದು ಕಾಣಿಸಿತು. ಅದೇ ಸಂಗಮ ಸ್ಥಾನವೆಂದು ಮನದಟ್ಟಾಯಿತು. ಹತ್ತಿರ ಬರುತ್ತಿದ್ದಂತೆ ಅಲ್ಲಿದ್ದ ಅನೇಕ ವಿದ್ಯುತ್ ಕಂಬಗಳಿಗೆ ಸಂಖ್ಯೆಯ ಬೋರ್ಡ್ ನೇತುಹಾಕಿದ್ದರು. ಸ್ನಾನಕ್ಕಿಳಿದವರ ಜೊತೆ ತಪ್ಪಿಹೋಗದಂತೆ ಸಂಗಡಿಗರು ಈ ಸಂಖ್ಯೆಯ ಬೋರ್ಡ್ ಕೆಳಗೆ ನಿಂತಿರುತ್ತಿದ್ದರು. ಅಲ್ಲೆಲ್ಲಾ ಮಹಿಳೆಯರು, ಪುರುಷರು, ಮುದುಕರು, ಹುಡುಗ ಹುಡುಗೀರು, ಮಕ್ಕಳು ಎಂಬ ಭೇದವಿಲ್ಲದೆ ಉಟ್ಟ ಧಿರಿಸನ್ನು ಬಲಿಸುತ್ತಿದ್ದುದ್ದು ಸಾಮಾನ್ಯ ದೃಶ್ಯ. ಸ್ವಲ್ಪ ಅತಿ ಎಂಬAತೆ ನಿಂಬೆಹಣ್ಣಿನ ದೀಪ, ಹಣತೆ, ಹೂ-ಕಾಯಿ-ಹಣ್ಣನ್ನು ಸಂಗಮ ತಟದ ಉದ್ದಕ್ಕೂ ದೇವಸ್ಮರಣೆ ಮಾಡುತ್ತಾ ಗಂಗೆಗೆ ಅರ್ಪಿಸುತ್ತಿದ್ದರು.



  ಗಂಗಾ-ಯಮುನಾ-ಸರಸ್ವತಿ ಕೂಡುವಿಕೆಯ ಜಳಕ

ಮೊದಲಿಗೆ ಜಿತೇಂದರ ಪವಿತ್ರ ಸ್ನಾನ ತೆಗೊಳ್ಳಲು ತೆರಳಿದ. ಅವನ ಬಟ್ಟೆಬರೆ ಕಾವಲುಕಾಯುತ್ತಾ ಸಂಗಮ ತಟದಲ್ಲಿ ನಿಂತಿದ್ದೆ. ವಿಐಪಿಗಳಿಗೆ ಒಂದೆಡೆ ಸ್ನಾನ ಘಟ್ಟವಿದ್ದರೆ ಜನಸಾಮಾನ್ಯರಿಗೆ ಒಂದೆಡೆ ಜಳಕ ಘಟ್ಟ. ನಾವಿದ್ದ ಸಾರ್ವಜನಿಕರ ಘಟ್ಟವನ್ನು ನೋಡಿದರೆ ಸುಮಾರು ಆರೇಳು ಕಿ.ಮೀ. ಉದ್ದಕ್ಕೂ ಸ್ನಾನಾರ್ಥಿಗಳು ಸಂಗಮಕ್ಕೆ ಧುಮುಕುತ್ತಿದ್ದರು. 

 ಜಿತೇಂದರನ ಸ್ನಾನ ಮುಗಿದ ಮೇಲೆ ನಾನು ಮೀಯಲು ಹೊರಟೆ. ಗಂಗಾ-ಯುಮನಾ-ಸರಸ್ವತಿ ನದಿ ಕೂಡಲಿಗೆ ಇಳಿಯುತ್ತಿದ್ದಂತೆ ಭವಿಷ್ಯದ ಯೋಜನೆ, ಬದುಕಿಗೆ ಸಲ್ಲುವ ಪಾರ್ಥನೆಯ ನುಡಿಯುತ್ತಾ ನೀರಿಗಿಳಿದೆ. ಬೇಕಾದಷ್ಟು ಬಾರಿಬಾರಿ ಮುಳುಗಹಾಕಿದೆ. ತೃಪ್ತಿ ಹೊಂದುವಷ್ಟು ಸಾರಿ ಕೈಯಿಂದ ನೀರೆತ್ತಿ ಅರ್ಘ್ಯ ಬಿಟ್ಟೆ. ಆಕಾಶವನ್ನೊಮ್ಮೆ ನೋಡಿದೆ; ತೋರುಬೆರಳನ್ನು ಸೂರ್ಯನಿಗೆ ಎತ್ತಿ ತೋರಿಸಿ ‘ನಾನಿದ್ದೇನೆ ನಿನ್ನ ಅಡಿ’ ಎಂದು ಗುನುಗಿದೆ. ಮೈಪೂರಾ ಬೆಚ್ಚಗಿನ ಭಾವಾವೇಶವಾದರೆ; ಗಂಗೆಯ ನೀರು ತುಂಬಾ ತಣ್ಣಗಿತ್ತು. ಯಮುನೆಯ ಜಲದ ವರ್ಣ ಕಡು ನೀಲಿ ಕಂಡರೆ, ಗಂಗಾ ಜಲ ತಿಳಿ ಹಸಿರು ಕಂಡುಬAತು. 


 ಸಂಗಮ ಸ್ಥಳದಲ್ಲಿ ಸ್ನಾನಾರ್ಥಿಗಳು ಸೇರಿರುವುದು


 ನಮ್ಮ ಪುಣ್ಯಸ್ನಾನ ಮುಗಿದಾಗ ಆಗಲೇ ಮಧ್ಯಾಹ್ನ ಹನ್ನೆರಡರ ಹತ್ತಿರ. ಉತ್ತರ ಪ್ರದೇಶದಲ್ಲಿ ಹೇಗೆ ಚಳಿ ಕೊರೆಯುತ್ತೊ ಹಾಗೆಯೇ ಬಿಸಿಲಿನ ಹೊಡೆತವೂ ಬಿರುಸು. ಸಹಯಾತ್ರಿ ಜಿತೇಂದರನ ಕೂಡಿ ಒಂದು ತೀರ್ಮಾನಕ್ಕೆ ಬಂದೆವು; ಇನ್ನು ನಾನು ನನಗೆ ಬೇಕುಬೇಕಾದಂತೆ ಮೇಳ ಸುತ್ತುವೆ. ನೀ ನಿನಗೆ ಇಷ್ಟಪಟ್ಟಲ್ಲಿ ತಿರುಗು. ರಾತ್ರಿ ಹೊತ್ತಿಗೆ ಮಾತ್ರ ನಾವು ತಂಗಿದ್ದ ಮನೆಯಲ್ಲಿ ಕಾಣುವ ಎಂದು ಪರಸ್ಪರ ಒಪ್ಪಿಕೊಂಡೆವು.

ಇಚ್ಛೆಗೆ ದಕ್ಕಿದಂತೆ ಮಹಾಮೇಳ: ಮನಸು ಪಾತರಗಿತ್ತಿ. ಈ ಕುಂಭದ ಮೇಳದಲ್ಲಿರುವ ಸರ್ವವನ್ನೂ ಹಾರಿ ಹಾರಿ ಕ್ರಮಿಸಿ ಕಣ್ಣಿಗೆ ಕಂಡಿದ್ದೆಲ್ಲಾ ಮೊಗೆಮೊಗೆದು ಆಹ್ಲಾದಿಸಬೇಕು ಎಂಬ ಇಚ್ಛೆ. ಗಂಗಾ-ಯಮುನೆಯ ಧುರಂಧರ ಜಲರಾಶಿ ನಾವು ತಂಗಿದ್ದ ಮನೆಗೆ ಕೆಲವೇ ಅಂತರದಲ್ಲಿದ್ದರೂ ಮನೆಯ ಟ್ಯಾಪಿನಲ್ಲಿ ಬೇಕಾದ ಹೊತ್ತಿಗೆ ನೀರು ಬರುತ್ತಿರಲಿಲ್ಲ. ಬೆಳಗ್ಗೆ ನಲ್ಲಿಯಲ್ಲಿ ಬಂದ ನೀರನ್ನು ಬಳಿಯಿದ್ದ ಪೈಬರ್ ಟ್ಯಾಂಕಿಯಲ್ಲಿ ತುಂಬಿಡಬೇಕಿತ್ತು ಎಂಬುದು ಮ್ಲಾನ ವಿಷಯ. ಸಂಜೆ ಹೊತ್ತಿಗೆ ಸೊಯಸೊಯ ನುಗ್ಗುವ ಸೊಳ್ಳೆ ಆ ಮನೆಯ ಮಲಗುವ ಕೋಣೆಯಲ್ಲಿ; ಇದರಿಂದ ರಗ್ಗಿನೊಳಕ್ಕೆ ತಲೆ ಕಾಲು ನುಗ್ಗಿಸಿ ಇದ್ದಷ್ಟೂ ದಿನವೂ ರಾತ್ರಿ ಕಳೆದೆವು.

 ಮರುಬೆಳಗಿನಿಂದ ಜಿತೇಂದರನ ಹೊರತಾಗಿ ಏಕಾಂಗಿ ಸುತ್ತಾಟಕ್ಕೆ ಹೊರಟೆ. ಆಗ ಕಂಡಿದ್ದೆಲ್ಲಾ ನಿಮ್ಮ ಮುಂದಿಡುವೆ...

ನಾಗಸಾಧು-ಅಘೋರಿ ಅಖಾಡ: ಸಂಗಮಕ್ಕೆ ತಲುಪುವ ದಾರೀಗುಂಟ ನಾಗಸಾಧು, ಅಘೋರಿಗಳ ಅಖಾಡಗಳು. ಅಖಾಡವೆಂದರೆ ಸಾಧುಗಳು ಸೇರಿ ರಚಿಸಿದ ಸಂಘ. ಹಾಗೆ ಹಲವು ಸಂಘಗಳಿವೆ. ಆ ಗುಂಪುಗಳಿಗೆ ಭಿನ್ನ ವಿಭಿನ್ನ ಹೆಸರುಗಳು. 

 ನಾಗಸಾಧು ಹಾಗೂ ಅಘೋರಿಗಳು ಸಾರ್ವಜನಿಕವಾಗಿ ದೈಹಿಕ ಆಯಾಮದಿಂದ ಸಾಮಾನ್ಯ ನೋಟಕ್ಕೆ ಸಮಾನ ಹೋಲಿಕೆ ಕಂಡುಬAದರೂ ಈ ಎರಡೂ ಸಂನ್ಯಾಸಿಗಳ ದೈವೀ ವಿಧಾನಗಳು ಬೇರೆಬೇರೆ. ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಬೆರೆಯುವ ತನಕ ನಾಗಸಾಧುಗಳಿದ್ದರೆ ಅಘೋರಿಗಳು ಹೊರಗಿನ ಪ್ರಪಂಚದಿAದ ಆಗಲಿ ಸಮಾಜದಿಂದಲೂ ಅಂತರ ಕಾಯ್ದುಕೊಂಡಿರುತ್ತಾರೆ. ಮಂದಿರ ಗುಡಿಗಳಲ್ಲಿ ನಾಗಸಾಧುಗಳು ವಿವಿಧ ದೇವದೇವತೆಗಳ ಪೂಜಿಸಿದರೆ ಅಘೋರಿಗಳು ಕೇವಲ ಮಸಣವಾಸಿ ಶಿವನ ಆರಾಧಕರಾಗಿದ್ದು, ಅತ್ಯಂತ ವೈಯಕ್ತಿಕ ಮೌಲ್ಯಯುತ ಸೊತ್ತು ಅನಿಸುವಷ್ಟು ತಲೆಬುರುಡೆಯೊಂದನ್ನು ಬಳಿಯಿಟ್ಟುಕೊಂಡಿರುತ್ತಾರೆ.

 ಜುನ್ನಾ ಅಖಾಡ, ಅಗ್ನಿ ಅಖಾಡ ಹೀಗೆ ಹತ್ತನ್ನೆರಡು ಸಾಧು ಪಂಗಡಗಳ ಟೆಂಟುಗಳು ಕುಂಭಮೇಳದಲ್ಲಿದ್ದವು. ಶ್ರೀಮಂತ ಅಖಾಡಗಳು ವೈಭವೋಪೇತ ಡೇರೆಗಳನ್ನು ಹಾಕಿದ್ದವು. 


  ಅಖಾಡದಲ್ಲಿ ನಾಗಸಾಧುಗಳು ಕಂಡ ರೀತಿ

 ಭಜನೆಗೆ ದನಿಯಾಗಲು, ಆಶೀರ್ವಾದ ಪಡೆಯಲು, ಫೋಟೋ ವಿಡಿಯೋ ಕ್ಲಿಕ್ಕಿಸುವ ಜೊತೆಗೆ ನೋಡುವ ಕುತೂಹಕ್ಕಾಗಿ ಈ ಸಾಧುಗಳ ಡೇರೆಗೆ ಜನ ಬರುತ್ತಿದ್ದರು. ಪವಿತ್ರಸ್ನಾನ ಮಾಡುವುದರಲ್ಲಿ ಇರುವ ತೃಪ್ತಿ, ನಾಗಸಾಧು ಅಘೋರಿಗಳ ನೋಡಿಕೊಂಡು ಹೋಗುವುದರಲ್ಲಿಯೂ ಯಾತ್ರಾರ್ಥಿಗಳಿಗಿತ್ತು. ಪುಣ್ಯಸ್ನಾನ ಬಿಟ್ಟರೆ ಈ ಸಾಧುಗಳೇ ಮೇಳದ ಪ್ರಮುಖ ಆಕರ್ಷಣೆ. 

 ನಾನೂ ಕೂಡ ಒಬ್ಬ ಹಿರೀಕ ನಾಗಸಾಧುವಿನ ಡೇರೆ ಪ್ರವೇಶಿಸಿದೆ. ಪಕ್ಕದಲ್ಲಿ ಆ ಸಾಧುವಿನ ಚೇಲಾಗಳಲ್ಲಿ(ಗುರುಸೇವೆ ಮಾಡುವ ಶಿಷ್ಯರನ್ನು ಸಾಮಾನ್ಯವಾಗಿ ಉತ್ತರ ಭಾರತದ ಸಾಧು ಬಾಬಾಗಳು ‘ಚೇಲಾ’ ಎಂದು ಕರೆಯುತ್ತಾರೆ) ಕೆಲವರು ಹೋಮ ಕುಂಡದಲ್ಲಿದ್ದ ಮರದ ತುಂಡುಗಳನ್ನು ಕೆದರುತ್ತಿದ್ದರು. ಕೆಲವರು ಆಹಾರವನ್ನು ಸಿದ್ಧಪಡಿಸುತ್ತಿದ್ದರು. ಚೇಲಾಗಳಲ್ಲಿ ಇನ್ನೂ ಒಂದಿಬ್ಬರು ಭಂಗಿ ಸೊಪ್ಪಿನ ಜೊಳ್ಳನ್ನು ಬಿಡಿಸುತ್ತಿದ್ದರು.

 ಅಲ್ಲಿದ್ದ ನಾಗಸಾಧುಗಳ ಹಿನ್ನೆಲೆಯಲ್ಲಿ ರಾಧೇಶ್ಯಾಮರ ಫೋಟೋ ಅಂಟಿಸಿದ್ದರು. ನನ್ನ ಕಂಡ ಹಿರಿ ವಯಸಿನ ಸಾಧುಗಳ ಪ್ರಶ್ನೆ ‘ಎಲ್ಲಿಂದ ಬಂದಿ?’ 

 ‘ಕರ್ನಾಟಕದಲ್ಲಿ ಕಾವೇರಿ ನದಿ ಹುಟ್ಟಿದ ಊರಿಂದ ಬಂದೆ’ ಎಂದೆ. ಆದರೆ ಆ ಸಾಧುಗಳಿಗೆ ಭರತಖಂಡದಲ್ಲಿ ಕರ್ನಾಟಕ ಎಂಬ ರಾಜ್ಯವಿದೆ ಎಂದು ಗೊತ್ತಿದ್ದಂತಿರಲಿಲ್ಲ. ಬದಲಾಗಿ ‘ಆಹ್ ಕೇರಳದಿಂದ ಬಂದಿರಾ!’ ಅಂತ ಉದ್ಗಾರವೆತ್ತಿದರು.

 ನಂತರ ‘ನೀವು ಅನಂತಪದ್ಮನಾಭನ ಸನ್ನಿಧಾನದಿಂದ ಬಂದೋರಲ್ಲವೇ ನೀವೆಲ್ಲಾ ಶ್ರೀಮಂತರೇ ಇರುತ್ತೀರಾ ದೊಡ್ಡದಾದ ನೋಟಿನ ಕಾಣಿಕೆ ಹಾಕಿ’ ಎಂದು ತಮಗಿದ್ದ ಲಕ್ಷಿö್ಮÃ ಮೋಹವನ್ನು ವ್ಯಕ್ತಪಡಿಸಿದರು. ಸಾಧು ಅನ್ನೋ ಗರ್ವದಿಂದ ಸರ್ವಸಂಗ ಪರಿತ್ಯಜಿಸಿದರೂ ದೇಹಾರೋಗ್ಯ ಆತಂಕ ರಹಿತವಾಗಿರಬೇಕಾದರೆ ದುಡ್ಡಿನ ಜರೂರತ್ತು ತಾನೇತಾನಾಗಿ ಸತ್ಯ ಅನ್ನಿಸಿಬಿಡುತ್ತದೆ ಎಂಬ ಭಾವ ನನ್ನೊಳಗೆ ಕಾಡಿತು. 

ಅಕ್ಬರನ ಕೋಟೆ: ಉತ್ತರದಿಂದ ಹಿಡಿದು ದಖನ್‌ನ ತನಕ ಭರತಖಂಡವನ್ನು ಆಳಿದ್ದ ದಿಲ್ಲಿಯ ಮೊಘಲ್ ಬಾದಷಾಹರಿಗೆ ಗಂಗೆಗಿAತ ಯಮುನಾ ನದಿಯನ್ನು ಕಂಡರೆ ಜಾಸ್ತಿ ಪ್ರೀತಿ. ಮಹಾಕುಂಭದ ಸಂಗಮ ಪ್ರದೇಶದಿಂದ ಸ್ವಲ್ಪ ದೂರದಲ್ಲೇ ಯಮುನಾನದಿ ತಟದ ಮೇಲೆ ನಿಂತಿದೆ ಅಕ್ಬರ ಸುಲ್ತಾನನ ಕೋಟೆ. 


  ಬಾದಷಾಹ ಅಕ್ಬರನ ಕೋಟೆಯ ಹೊರನೋಟ

 ಕೋಟೆಯ ಪ್ರಾಂಗಣದಲ್ಲಿ ಸುತ್ತಹಾಕುತ್ತಿದ್ದಂತೆ ಎದುರುಗೊಳ್ಳುತ್ತದೆ ಕೆಂಪು ಕಲ್ಲಿನಿಂದ ಕಟ್ಟಿದ ಅಕ್ಬರನ ಅರಮನೆ. ಆ ಅರಮನೆಯ ಎತ್ತರದ ಕಮಾನುಗಳು, ಎರಡಂತಸ್ತಿನ ಮೇಲೆ ಹೊರಚಾಚಿದ ಬಾಲ್ಕನಿಯ ಕೆತ್ತನೆಗಳು, ಸುಂದರ ಕಸೂತಿಯ ಅವೆಷ್ಟೋ ಕಿಟಕಿಗಳು... ಹಾ! ಆ ಭವ್ಯತೆಯ ನೋಡಿದರೆ ಅಕ್ಬರನ ಶ್ರೀಮಂತಿಕೆಯ ಅಬ್ಬರ ಜೋರಾಗಿದ್ದವು ಅನಿಸುವುದು. ಈ ಕಾರಣದಿಂದಲೋ ಏನೋ, ಅರಮನೆಯ ಒಳಗೆ ಪ್ರವೇಶ ನಿರ್ಬಂಧಿಸಿದ್ದು; ಅದೀಗ ಮಿಲಿಟರಿ ಸುಪರ್ದಿಯಲ್ಲಿದೆ.


ಅಕ್ಷಯ ವಟ: ಸುಲ್ತಾನ ಅಕ್ಬರನ ಕೋಟೆ ಆವರಣದಲ್ಲಿ ಬೃಹತ್ ಸುತ್ತಳತೆಯ ಮೂರು ಆಲದ ಮರಗಳಿವೆ. ಈ ಮರಗಳನ್ನು ಅಕ್ಷಯ ವಟವೃಕ್ಷ ಎಂದು ಕರೆಯಲಾಗುತ್ತಿದೆ. ಈ ವೃಕ್ಷಗಳ ವಯಸ್ಸು ಊಹೆಗೆ ನಿಲುಕದಂತೆ. ಹಾಗಾಗಿಯೂ ರಾಮಾಯಣ ಕಾಲದಿಂದಲೂ ಈ ಮರಗಳಿದ್ದವು ಎಂಬ ನಂಬಿಕೆ. 

 ಶ್ರೀರಾಮ ವನವಾಸದಲ್ಲಿದ್ದಾಗ ಸೀತಾ ರಾಮರೂ ಈ ಆಲದ ಮರದ ಕೆಳಗೆ ಕುಳಿತು ಪ್ರಯಾಣದ ದಣಿವು ನೀಗಿಸಿದರು ಎಂಬ ಉಲ್ಲೇಖ ಪುರಾಣದಲ್ಲಿರುವುದಂತೆ. ಅಕಾಲದಿಂದಲೂ ಇದ್ದ ಮರವಿದು ಎಂಬ ಕಾರಣದಿಂದ ನನಗೆ ಆ ವೃಕ್ಷಗಳ ನೋಡುತ್ತಿದ್ದಂತೆ ಭಾವೋನ್ಮಾದ ಕೆದರಿತು. 

 ಅಲ್ಲಿದ್ದ ಮೈಕಿನಲ್ಲಿ ‘ಅಕ್ಷಯ ವಟವೃಕ್ಷದ ಎಲೆಗಳು ಹಳದಿಯಾದದ್ದೇ ಇಲ್ಲ’ ಅಂತ ಧ್ವನಿ ಮೊಳಗಿಸುತ್ತಿದ್ದರು. ತಲೆಯೆತ್ತಿ ಮರದ ಎಲೆಗಳನ್ನು ನೋಡಿದರೆ ಹೌದಲ್ವೇ! ಒಂದೇ ಒಂದು ಹಳದಿ ಎಲೆಗಳಿಲ್ಲದೆ ಹಸಿರೂ ಹಸಿರೂ ಮರ ಪೂರ್ತಿ. 

 ವಟವೃಕ್ಷದ ಬೇರುಗಳನ್ನು ಪೂಜಿಸುತ್ತಿದ್ದರು. ಅಭೇದ್ಯವಾಗಿ ಹರಡಿದ ಆಲದ ಬೇರುಗಳಿಗೆ ಹಣೆಹಚ್ಚಿ ನಮಸ್ಕರಿಸಿದೆ. ಯಾವಾಗ ಈ ಆಲದ ಮರ ಧರೆಗುರುಳುತ್ತದೆಯೋ ಇಲ್ಲ ಎಲೆಪೂರ್ತಿ ಒಣಗಿ ಸಾಯುತ್ತದೆಯೋ ಆವತ್ತೇ ಪ್ರಪಂಚÀ ನಾಶವಾಗಲಿದೆ. ಹಾಗಾಗಿ ಇದು ‘ಅಕ್ಷಯ ವಟವೃಕ್ಷ’ವಾಗಿದ್ದು ಎಂದೂ ನಾಶ ಹೊಂದಲಾರದು ಎಂಬುದು ದೊಡ್ಡವರ ವಿಶ್ವಾಸ.

ಸರಸ್ವತಿ ಕೂಪ: ತ್ರಿವೇಣಿ ಸಂಗಮದಲ್ಲಿ ಗಂಗಾ-ಯಮುನೆಯ ಜೊತೆÉಯಾಗಿ ಸರಸ್ವತಿ ನದಿಯು ಅದೃಶ್ಯಳಾಗಿ ಹರಿಯುತ್ತಿದ್ದಾಳೆ ಎಂಬುದು ಪುರಾಣದಿಂದಲೂ ಬಂದ ಅರಿಕೆ. ಪುರಾಣ ಪುಣ್ಯದ ಸರಸ್ವತಿ ನದಿಯು ಭೂಮಿಯಾಳ ಹರಿಯುತ್ತಿದ್ದಾಳೆ ಎಂಬ ನಂಬಿಕೆಗೆ ಸಾಕ್ಷಿ ನೆಪದಲ್ಲಿದೆ ಈ ಸರಸ್ವತಿ ಕೂಪ. 

 ಕೂಪವೆಂದರೆ ಬಾವಿ. ಬಹಳ ಅಗಲವಾದ ಬಾಯಿ ಹೊಂದಿರುವ ಈ ಸರಸ್ವತಿ ಕೂಪ ಅಕ್ಬರÀ ಕೋಟೆಯ ಆವರಣದಲ್ಲಿದೆ. ಬಾವಿ ಮೇಲೆ ಪಾರದರ್ಶಕ ಗಾಜಿನ ಹಲಗೆಗಳನ್ನು ಜೋಡಿಸಲಾಗಿದ್ದು, ಬಗ್ಗಿ ನೋಡಿದಾಗ ನೀರ ರಾಶಿಯು ತಳಭಾಗದಲ್ಲಿರುವುದು ಕಂಡುಬAತು. 

 ಪಕ್ಕದಲ್ಲೇ ಯಮುನಾ ನದಿ ಹರಿಯುತ್ತಿರುವುದರಿಂದ ಸರಸ್ವತಿ ಕೂಪದಲ್ಲಿರುವ ನೀರು ಸರಸ್ವತಿಯದೋ ಯಮುನೆಯದೋ ಎಂದು ಗೊಂದಲಕ್ಕೀಡು ಮಾಡಿತು! 

ಬಡೇ ಹನುಮಾನ್ ಮಂದಿರ: ಮೊಘಲ್ ಬಾದಷಾಹ ಅಕ್ಬರ ಪರಧರ್ಮ ಸಹಿಷ್ಣು ಎಂಬುದಕ್ಕೆ ಸಾಕ್ಷಿ ಎಂಬತಿದೆ, ಬಡೇ ಹನುಮಾನ್ ಮಂದಿರ. ಅಕ್ಬರ ಕೋಟೆಗೆ ತಾಕಿಕೊಂಡೇ ಇದೆ ಈ ಮಂದಿರ.

 ಹನುಮಂತನ ವಿಗ್ರಹ ಇಪ್ಪತ್ತು ಮೂವತ್ತು ಅಡಿ ವಿದ್ದವಿದ್ದ ಕಾರಣ ಬಡೇ, ದೊಡ್ಡದು ಎಂದು ಕರೆಯಲಾಗಿದೆ. ದೇಶಪೂರ್ತಿ ಇರುವ ದೇವಸ್ಥಾನಗಳಲ್ಲಿ ದೇವಾನುದೇವತೆಗಳ ವಿಗ್ರಹಗಳನ್ನು ಲಂಭವಾಗಿ ನಿಲ್ಲಿಸಿ ಪೂಜಿಸಲಾಗುತ್ತದೆ. ಆದರೆ ಬಡೇ ಹನುಮಂತನ ವಿಗ್ರಹವನ್ನು ನೆಲದಲ್ಲಿ ಮಟ್ಟಸವಾಗಿ ಮಲಗಿಸಲಾಗಿದೆ. ಅಂದರೆ ಶಿಲೆಯ ಅಂಟಿಕೊAಡತೆ ಹನುಮಂತನ ಆಕೃತಿಯ ನೆಲಮಟ್ಟದಲ್ಲೇ ಅಡ್ಡಲಾಗಿ ಕೆತ್ತಲಾಗಿದೆ.

 ಭಕ್ತ ಜನರು ನೆಲದಲ್ಲಿ ಹರಡಿರುವ ಈ ಬೃಹತ್ ಮೂರ್ತಿಗೆ ಗುಡಿಯ ಮೇಲಿಂದ ಹತ್ತಡಿ ಎತ್ತರದಲ್ಲಿ ನಿಂತು ಕೈಮುಗಿದು ಸಾಗಬೇಕಿತ್ತು. ಜನರ ನೂಕು ಹೆಚ್ಚಿದ್ದರಿಂದ ಕೆಲಕ್ಷಣಗಳಷ್ಟೇ ಬಡೆ ಹನುಮಾನನ ಉದ್ದಗಲವ ಕಣ್ಣುದುಂಬಲು ಸಾಧ್ಯವಾದುದು.


  ವೇಷಧಾರಿ ಪೋರಿ ಜೊತೆ ಲೇಖಕರು


ಮನಕಾಮೇಶ್ವರ ಗುಡಿ ಮತ್ತು ಆದಿಶಂಕರ ಮಂಟಪ: ಹಿಂದೂಸ್ಥಾನದಲ್ಲಿ ಜೈನ ಮತ್ತು ಬೌದ್ಧ ಧರ್ಮವು ಅಗಾಧವಾಗಿ ಪ್ರಭಾವಿಸುತ್ತಿದ್ದ ೮ನೇ ಶತಮಾನ. ಆ ಕಾಲದಲ್ಲಿ ಹಿಂದೂ ಧರ್ಮದ ಮೌಲಿಕ ನೆಲೆಗಟ್ಟನ್ನು ಶೋಧಿಸಿ ಹಿಂದೂ ಪರಂಪರೆಯ ಮುಕ್ತತೆಯನ್ನು ಸಾರಿದವರು ಆದಿಶಂಕರಾಚಾರ್ಯರು. 

 ಹೀಗೆ ಈ ಸನಾತನ ಧರ್ಮವನ್ನು ಪುನರುಜ್ಜೀವಗೊಳಿಸಲು ಶ್ರೀಶಂಕರರು ಹಟತೊಟ್ಟಿದ್ದಕ್ಕೆ ಪುರಾವೆಯಾಗಿ ಕಾಣಸಿಗುವುದು -ಗಂಗಾನದಿ ತಟದಲ್ಲಿರುವ ಮನಕಾಮೇಶ್ವರ ಮಂದಿರ. 

 ಆಚಾರ್ಯ ಶಂಕರರು ಉತ್ತರದ ಬಹುತೇಕ ಸಾಧುಸಂತ ಪಂಡಿತೋತ್ತಮರನ್ನು ಒಟ್ಟುಗೂಡಿಸಿ ಪ್ರಯಾಗರಾಜ್‌ನ ಒಂದೆಡೆ ಸಭೆ ಸೇರಿಸಿದರು. ಅಲ್ಲಿ ಹಿಂದೂ ಧರ್ಮದ ಉಳಿವಿಗಾಗಿ ಮಾತುಕತೆ ನಡೆಸಿದರು. ಅಂಥ ಯೋಜನೆ ಹಾಕಿದ ಸ್ಥಳದಲ್ಲಿ ಮನಕಾಮೇಶ್ವರ ಮಂದಿರವನ್ನು ಕಟ್ಟಲಾಗಿದೆ. 

 ಈ ಮಂದಿರದಲ್ಲಿ ಮಹಾಮಂಗಳಾರತಿ ವೇಳೆ ಮನಕಾಮೇಶ್ವರ ದೇವರಿಗೆ ಭಕ್ತ ಜನರು ಹತ್ತಾರು ಡಮರುಗಳನ್ನು ಎರಡೂ ಕೈಗಳಲ್ಲಿ ಹಿಡಿದೆತ್ತಿ ಆಡಿಸುತ್ತಾರೆ. ಆಗ ಹೊಮ್ಮುವ ಢಮಢಮ ನಾದ ಕೇಳಿಯೇ ಆಸ್ವಾದಿಸಬೇಕು. 

 ಗಂಗೆಯ ದಂಡೆ ಮೇಲೆ ಮನಕಾಮೇಶ್ವರ ಮಂದಿರವಿದ್ದರೆ ಯಮುನಾ ನದಿಯ ದಡದಲ್ಲಿ ಆದಿಶಂಕರ ವಿಮಾನ ಮಂಟಪವಿದೆ. ಸನಾತನ ಧರ್ಮದ ಆಧಾರ ಸ್ತಂಭ ಶಂಕರಾಚಾರ್ಯರ ನೆನಪಿಗೆ ಕಟ್ಟಿಸಿದ ದೇವಸ್ಥಾನವಿದು. ಆದಿಶಂಕರ ಮಂಟಪದ ನಿರ್ಮಾಣ ೨೦ನೇ ಶತಮಾನದಲ್ಲಿ ನಡೆಯಿತು. ಈ ದೇವಸ್ಥಾನದ ವಿಶೇಷವೆಂದರೆ ಇದರ ಶಿರೋಭಾಗದಲ್ಲಿ ದಕ್ಷಿಣ ಭಾರತದ ದ್ರಾವಿಡ ಶೈಲಿಯ ವಿಮಾನ ಮಂಟಪ ರಾರಾಜಿಸಿದೆ. ದೇವಸ್ಥಾನಕ್ಕೆ ನಾಲ್ಕು ಅಂತಸ್ತುಗಳಿರುವ ಕಾರಣ ‘ಮಂಟಪ’ ಎನ್ನಲಾಗಿದೆ. ಒಂದೊAದು ಮಂಟಪದಲ್ಲೂ ಬೇರೆಬೇರೆ ದೇವರ ಮೂರ್ತಿಗಳನ್ನು ಪೂಜಿಸುತ್ತಾರೆ. ಕೊನೆಯ ಅಂದರೆ ನಾಲ್ಕನೆಯ ಮಂಟಪದಲ್ಲಿ ಬೃಹತ್ ಗಾತ್ರದ ಶಿವಲಿಂಗವಿರುವುದು. ಒಮ್ಮೆ ಅಲ್ಲಿ ನಿಂತು ಸಂಗಮದ ಕಡೆ ಕಣ್ಣು ಹಾಯಿಸಿದಾಗ ಕುಂಭ ಮೇಳದ ಊಹಿಸಲಾಗದಷ್ಟು ವಿಸ್ತಾರದ ನೋಟ ಲಭ್ಯವಾಯಿತು.

ಕೊನೆಯ ದಿನ: ಫೆ.೧೦ರಂದು ನಾನು ಮಹಾ ಕುಂಭಕ್ಕೆ ಸಾಷ್ಟಾಂಗ ನಮಸ್ಕರಿಸಿ ಊರಿಗೆ ಮರಳಲು ಸಿದ್ಧನಾದೆ. ಮೂರು ದಿನಗಳನ್ನು ಮೇಳದಲ್ಲಿ ಕಳೆದಿದ್ದಾಯಿತು. ಮತ್ತೊಮ್ಮೆ ಇಲ್ಲಿಗೆ ಬರಬೇಕೆಂದು ಮನದ ಸೆಳೆತ. ಇಲ್ಲಿಯ ಪರಿಸರದ ಪ್ರಚೋದನೆ ದೈವಿಕವಾದುದು. ಇಂಥ ಅತಿ ದೊಡ್ಡ ಧಾರ್ಮಿಕ ಉತ್ಸವವನ್ನು ಸಂಘಟಿಸುವುದು ಅಸಾಮಾನ್ಯವೂ ಹೌದು.

 ಸರಿದ ರಾತ್ರಿ ೧:೩೦ರ ವೇಳೆ ಬೆಂಗಳೂರಿಗೆ ಹೋಗುವ ಸಂಗಮಿತ್ರ ಎಕ್ಸ್ಪ್ರೆಸ್ ರೈಲನ್ನು ಹಿಡಿಯಬೇಕಾಗಿತ್ತು. ಮತ್ತೊಮ್ಮೆ ಕುಂಭÀಮೇಳದ ರಸ್ತೇಗುಂಟ ನಡೆದು, ಅಂಚಿನಲ್ಲಿದ್ದ ಎತ್ತರದ ಮೆಟ್ಟಲಿನಲ್ಲಿ ಕೂತು ಕಣ್ಮುಚ್ಚಿ ವಾತಾವರಣದ ಸುಖವನ್ನು ಧ್ಯಾನಿಸಿದೆ. ಗಂಗಾ ನದಿಯ ಸಂಜೆಯ ಹಿತಕರ ಬೀಸುಗಾಳಿ ನನ್ನ ಮುಖದಗಲ ಸಂಚರಿಸಿದAತೆನಿಸಿ ಉನ್ಮಾದಗೊಂಡೆ. 

 ಮೂರು ದಿನ ಕುಂಭದಲ್ಲಿ ಉಳಕೊಳ್ಳಲು ಅವಕಾಶಕೊಟ್ಟ ಸ್ಥಳೀಯ ಮನೆಯ ಒಡತಿಗೆ ‘ಹೊರಡುತ್ತೇನೆ’ ಎಂದು ತಿಳಿಸಿ, ಕೋಣೆ ಖಾಲಿ ಮಾಡಿಯಾಯ್ತು. ಬ್ಯಾಗ್ ಹೆಗಲಿಗೇರಿಸಿ ಬಂದ ಹಾಗೆಯೇ ವಾಪಾಸ್ ಪ್ರಯಾಗರಾಜ್ ಜಂಕ್ಷನ್ ರೇಲ್ವೆ ಸ್ಟೇಶನ್ ಹಾದಿ ಹಿಡಿದೆ.